5 ನಿಮಿಷಕ್ಕೆ 400 ಕಿಮೀ – ಇವಿ ಜಗತ್ತಿನ ನಿದ್ದೆಗೆಡಿಸಿದ ಬಿವೈಡಿ!

Public TV
3 Min Read

ಲೆಕ್ಟ್ರಿಕ್ ಕಾರು (Electric Car) ಚಾರ್ಜ್‌ ಆಗೋದಕ್ಕೆ ಗಂಟೆಗಟ್ಟಲೇ ಬೇಕು, ಪೆಟ್ರೋಲ್‌ ಕಾರು ಆದ್ರೆ 5 ನಿಮಿಷಕ್ಕೆ ಪೆಟ್ರೋಲ್ ಟ್ಯಾಂಕ್‌ ತುಂಬಿ ಬಿಡುತ್ತೆ. ಯಾರಿಗೆ ಬೇಕು ಈ ಎಲೆಕ್ಟ್ರಿಕ್ ಕಾರು ಎಂದು ನಿಮ್ಮ ಮನಸ್ಸಿನಲ್ಲಿ ತಿರಸ್ಕಾರ ಬಂದಿದ್ದರೆ ಈ ಸುದ್ದಿ ಓದಿ! ಮತ್ಯಾವತ್ತೂ ನೀವು ಎಲೆಕ್ಟ್ರಿಕ್ ಕಾರಿನ ಬಗ್ಗೆ ತಿರಸ್ಕಾರದ ಮಾತಾಡಲ್ಲ!

ಚೀನಾದ (China) ಕಾರು ತಯಾರಕ ಕಂಪನಿ ಬಿಲ್ಡ್ ಯುವರ್ ಡ್ರೀಮ್ (BYD) ಜನರ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿದಿದೆ. ಈ ಮೂಲಕ ಕಂಪನಿಯು ದೊಡ್ಡ ಯಶಸ್ಸನ್ನು ಕಂಡಿದೆ. ಕಾರನ್ನು ವೇಗವಾಗಿ ಚಾರ್ಜ್‌ ಮಾಡಲು ವಿಶಿಷ್ಟವಾದ ತಂತ್ರಜ್ಞಾನವನ್ನು ಬಿವೈಡಿ ಪರಿಚಯಿಸಿದೆ. ಈ ತಂತ್ರಜ್ಞಾನದಿಂದ ಕಾರಿನ ಇಂಧನದ ಟ್ಯಾಂಕ್‌ಗೆ ಪೆಟ್ರೋಲ್‌ ತುಂಬುವಷ್ಟೇ ಸಮಯದಲ್ಲಿ ಬ್ಯಾಟರಿ ಚಾರ್ಜ್‌ ಆಗುತ್ತದೆ! ಇದು ಬಿವೈಡಿ ತಂತ್ರಜ್ಞಾನದ ವಿಶೇಷ.

ಈ ಸಮಯದಲ್ಲಿ ಚಾರ್ಜ್‌ ಆದ ಬ್ಯಾಟರಿ, ಸುಮಾರು 400 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿರುತ್ತದೆ. ಇದನ್ನು ಎಲೆಕ್ಟ್ರಿಕ್ ಕಾರುಗಳ ವಲಯದಲ್ಲಿ ಪ್ರಮುಖ ಸಾಧನೆ ಎಂದು ಪರಿಗಣಿಸಲಾಗಿದೆ. ಇದು EV ಉದ್ಯಮದ ದಿಕ್ಕನ್ನೇ ಬದಲಾಯಿಸುತ್ತದೆ ಎಂಬ ವಿಶ್ವಾಸ ಸಹ ಮೂಡಿಸಿದೆ.

ಮಾ.17 ರಂದು ಕಂಪನಿಯ ಶೆನ್ಜೆನ್ ಪ್ರಧಾನ ಕಚೇರಿಯಿಂದ BYD ಸಂಸ್ಥಾಪಕ ಮತ್ತು ಅಧ್ಯಕ್ಷ ವಾಂಗ್ ಚುವಾನ್ಫು ಈ ಚಾರ್ಜಿಂಗ್‌ ವ್ಯವಸ್ಥೆಯನ್ನು ಘೋಷಿಸಿದ್ದರು. ಈ ವ್ಯವಸ್ಥೆಗೆ ʻಸೂಪರ್ ಇ-ಪ್ಲಾಟ್‌ಫಾರ್ಮ್ʼ ಎಂದು ಹೆಸರಿಡಲಾಗಿದೆ. ಇದು ಟೆಸ್ಲಾಗಿಂತ ಮೂರು ಪಟ್ಟು ವೇಗವಾಗಿ ಚಾರ್ಜ್‌ ಆಗುವ ಸಾಮರ್ಥ್ಯ ಹೊಂದಿದೆ.

BYDಯ ಹೊಸ ಆರ್ಕಿಟೆಕ್ಚರ್​ 1000 ವೋಲ್ಟ್‌ಗಳ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 1000 ಕಿಲೋವ್ಯಾಟ್‌ಗಳವರೆಗೆ (1 ಮೆಗಾವ್ಯಾಟ್) ಚಾರ್ಜಿಂಗ್ ವೇಗವನ್ನು ಹೊಂದಿದೆ. ಇದು ಟೆಸ್ಲಾದ ಹೊಸ V4 ಸೂಪರ್‌ಚಾರ್ಜರ್‌ಗೆ ಹೋಲಿಸಿದರೆ ಅದು ಸೂಪರ್‌ಚಾರ್ಜರ್ ಗರಿಷ್ಠ 500kW ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 15 ನಿಮಿಷಗಳಲ್ಲಿ ಸುಮಾರು 275 ಕಿಮೀ ಸಂಚರಿಸುವಷ್ಟು ಬ್ಯಾಟರಿ ಚಾರ್ಜ್‌ ಆಗುತ್ತದೆ. BYD ಯ ಸೂಪರ್‌ಚಾರ್ಜರ್ 3 ಪಟ್ಟು ಕಡಿಮೆ ಸಮಯದಲ್ಲಿ ಟೆಸ್ಲಾಗಿಂತ ಹೆಚ್ಚಿನ ದೂರ ಕ್ರಮಿಸುವ ಶಕ್ತಿಯನ್ನು ಬ್ಯಾಟರಿಗೆ ಒದಗಿಸುತ್ತದೆ.

ಅತ್ಯಂತ ಸುರಕ್ಷಿತ ಬ್ಯಾಟರಿ
BYD 1500 ವೋಲ್ಟ್‌ಗಳವರೆಗಿನ ಸಿಲಿಕಾನ್ ಕಾರ್ಬೈಡ್ ಪವರ್ ಚಿಪ್‌ಗಳೊಂದಿಗೆ ತನ್ನದೇ ಆದ ಫ್ಲ್ಯಾಶ್ ಚಾರ್ಜಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ಕಂಪನಿ ಅಭಿವೃದ್ಧಿಪಡಿಸಿದ ಬ್ಲೇಡ್ ಲಿಥಿಯಂ-ಐಯಾನ್ ಫಾಸ್ಫೇಟ್ ಬ್ಯಾಟರಿ ವಿಶ್ವದಲ್ಲೇ ಅತ್ಯಂತ ಸುರಕ್ಷಿತ ಮತ್ತು ಪರಿಣಾಮಕಾರಿ EV ಬ್ಯಾಟರಿಯಾಗಿದೆ.

BYDಯ ಕಾರುಗಳಲ್ಲಿ ತನ್ನದೇ ಆದ ಅಭಿವೃದ್ಧಿಪಡಿಸಿದ BLADE ಬ್ಯಾಟರಿ ತಂತ್ರಜ್ಞಾನವನ್ನು ಬಳಸುತ್ತದೆ. ಇದನ್ನು ಸೂಪರ್ ಇ-ಪ್ಲಾಟ್‌ಫಾರ್ಮ್ ಪ್ರಕಾರ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಸಮತಟ್ಟಾದ ರಚನೆ ಇತರ ಕಾರು ತಯಾರಕರು ಬಳಸುವ ಸಿಲಿಂಡರ್ ಮತ್ತು ಪೌಲ್ ವಿನ್ಯಾಸ ಬ್ಯಾಟರಿಗಳಿಗಿಂತ ಉತ್ತಮವಾಗಿದೆ.

ಸೂಪರ್‌ಚಾರ್ಜರ್‌ನ ಅನಾನೂಕೂಲವೇನು?
BYDಯ ಈ ಸೂಪರ್‌ಚಾರ್ಜರ್ ಬ್ಯಾಟರಿಗೆ (Battery) ಅತಿ ಹೆಚ್ಚಿನ ವೋಲ್ಟೇಜ್‌ನಲ್ಲಿ ಕರೆಂಟ್ ಪೂರೈಸುತ್ತದೆ. ಇದು ಕೆಲವು ಬ್ಯಾಟರಿಗಳಿಗೆ ಹಾನಿಕಾರಕವಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಿದ್ಯುತ್ ಕಾರುಗಳಲ್ಲಿ NMC (ನಿಕಲ್ ಮ್ಯಾಂಗನೀಸ್ ಕೋಬಾಲ್ಟ್), LFP (ಲಿಥಿಯಂ ಐರನ್ ಫಾಸ್ಫೇಟ್) ನಂತಹ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಹೆಚ್ಚಿನ ವೋಲ್ಟೇಜ್‌ನಿಂದಾಗಿ ಈ ಬ್ಯಾಟರಿಗಳು ಬೇಗನೆ ಬಿಸಿಯಾಗಬಹುದು. ಅಷ್ಟೇ ಅಲ್ಲ ಬ್ಯಾಟರಿ ವೇಗವಾಗಿ ಖಾಲಿಯಾಗುವ ಸಂಭವ ಇದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಸೂಪರ್‌ಚಾರ್ಜರ್‌ ಯಾವ ಮಾಡೆಲ್‌ ಕಾರಿಗೆ ಲಭ್ಯ?
BYD ತನ್ನ ಎರಡು ಪ್ರೀಮಿಯಂ ಮಾದರಿಗಳಲ್ಲಿ ಈ ತಂತ್ರಜ್ಞಾನವನ್ನು ನೀಡುತ್ತಿದೆ. ಇದರಲ್ಲಿ ಹಾನ್ ಎಲ್ ಸೆಡಾನ್ ಮತ್ತು ಟ್ಯಾಂಗ್ ಎಲ್ ಎಸ್‌ಯುವಿ ಸೇರಿವೆ. ಅವುಗಳ ಬೆಲೆ ಕ್ರಮವಾಗಿ 270,000 ಯುವಾನ್ (30 ಲಕ್ಷ ರೂ.) ಮತ್ತು 280,000 ಯುವಾನ್ (33.5 ಲಕ್ಷ ರೂ.) ಈ ಎರಡೂ ಕಾರುಗಳಲ್ಲಿ ಕಂಪನಿಯು ಅಡ್ವಾನ್ಸ್ಡ್ ಡ್ರೈವಿಂಗ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ವ್ಯವಸ್ಥೆಯನ್ನು ಒದಗಿಸಿದೆ.

ಸೂಪರ್‌ಚಾರ್ಜರ್‌ನಿಂದ ಬಿವೈಡಿ ಮಾರಾಟ ಹೆಚ್ಚಳ
ಸೂಪರ್‌ಚಾರ್ಜರ್‌ನಿಂದ ಚೀನಾ ಕಳೆದ ವರ್ಷ ಇವಿ ಮಾರಾಟದಲ್ಲಿ 40% ಬೆಳವಣಿಗೆಯನ್ನು ಸಾಧಿಸಿತ್ತು. ಇನ್ನೂ ಚೀನಾದಾದ್ಯಂತ 4,000 ಕ್ಕೂ ಹೆಚ್ಚು ಹೊಸ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಬಿವೈಡಿ ಮುಂದಾಗಿದೆ. ಈ ಸುದ್ದಿಯ ಬೆನ್ನಲ್ಲೇ ಅಮೆರಿಕ ಮೂಲದ ಟೆಸ್ಲಾ ಷೇರುಗಳು ಕುಸಿತ ಕಂಡಿತ್ತು.

Share This Article