ನಾಪತ್ತೆಯಾಗಿದ್ದ ಅರುಣಾಚಲ ಯುವಕನಿಗೆ ಚೀನಾ ಕಸ್ಟಡಿಯಲ್ಲಿ ಕರೆಂಟ್ ಶಾಕ್

Public TV
1 Min Read

ಇಟಾನಗರ: ಅಪಹರಣಕ್ಕೊಳಗಾಗಿದ್ದ ಅರುಣಾಚಲ ಮೂಲದ ಯುವಕನನ್ನು ಚೀನಾ ಬಿಡುಗಡೆ ಮಾಡಿದೆ. ಸೋಮವಾರ ತನ್ನ ಕುಟುಂಬ ಸೇರಿದ ಯುವಕನಿಗೆ ಅಪಹರಣಕ್ಕೊಳಗಾಗಿದ್ದಾಗ ಚೀನಾ ತನ್ನ ಕಸ್ಟಡಿಯಲ್ಲಿ ಒದ್ದು, ವಿದ್ಯುತ್ ಶಾಕ್ ನೀಡಿದೆ ಎಂದು ಆತನ ತಂದೆ ಆರೋಪಿಸಿದ್ದಾರೆ.

ಸೋಮವಾರ ಸಂಜೆ ಅಪ್ಪರ್ ಸಿಯಾಂಗ್ ಜಿಲ್ಲೆಯ ಟ್ಯೂಟಿಂಗ್‌ನಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಸೇನೆ ಅಪಹರಣವಾಗಿದ್ದ ಯುವಕ ಮಿರಾಮ್ ಟ್ಯಾರೋನ್‌ನನ್ನು ತನ್ನ ಪೋಷಕರೊಂದಿಗೆ ಮತ್ತೆ ಸೇರಿಸಿದೆ ಎಂದು ಜಿಲ್ಲಾ ಉಪ ಆಯುಕ್ತ ಶಾಶ್ವತ್ ಸೌರಭ್ ತಿಳಿಸಿದ್ದರು.

ಭಾರತಕ್ಕೆ ಮರಳಿದ ಮಿರಾಮ್‌ನನ್ನು ಸ್ಥಳೀಯ ಆಡಳಿತ ಮತ್ತು ಪಂಚಾಯಿತಿ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಆದರೆ ಆತನ ತಂದೆ ಒಪಾಂಗ್ ಟ್ಯಾರೋನ್ ಇಡೀ ಘಟನೆಯಿಂದಾಗಿ ನನ್ನ ಮಗ ಹೆದರಿದ್ದಾನೆ ಹಾಗೂ ಮಾನಸಿಕವಾಗಿ ಕುಗ್ಗಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕನನ್ನು ಬಿಡುಗಡೆ ಮಾಡಿದ ಚೀನಾ

ಒಂದು ವಾರಕ್ಕೂ ಹೆಚ್ಚು ಕಾಲ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಆತನನ್ನು ವಶದಲ್ಲಿಟ್ಟುಕೊಂಡಿತ್ತು. ಈ ಸಂದರ್ಭದಲ್ಲಿ ಅವರನ್ನು ಕಟ್ಟಿಹಾಕಿ ಕಣ್ಣು ಮುಚ್ಚಲಾಗಿತ್ತು ಎಂದು ತಂದೆ ಆರೋಪಿಸಿದ್ದಾರೆ.

ಅವನು ಇನ್ನೂ ಆಘಾತದಲ್ಲಿಯೇ ಇದ್ದಾನೆ. ಅವನಿಗೆ ಬೆನ್ನಿಗೆ ಒದೆಯಲಾಗಿತ್ತು ಹಾಗೂ ಆರಂಭದಲ್ಲಿ ವಿದ್ಯುತ್ ಶಾಕ್ ನೀಡಲಾಗಿತ್ತು. ಅವನ ಕಣ್ಣುಗಳನ್ನು ಹೆಚ್ಚಿನ ಸಮಯ ಮುಚ್ಚಿಯೇ ಇರಿಸಿದ್ದರು ಹಾಗೂ ಅವನ ಕೈಗಳನ್ನು ಬಿಗಿಯಾಗಿ ಕಟ್ಟಿದ್ದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಡವರ ಕಲ್ಯಾಣವೇ ನಮ್ಮ ಆದ್ಯತೆ: ನರೇಂದ್ರ ಮೋದಿ

ಊಟ ಹಾಗೂ ವಿಶ್ರಾಂತಿಯ ಸಮಯದಲ್ಲಿ ಮಾತ್ರ ಆತನ ಕೈಯನ್ನು ಬಿಡಿಸಲಾಗುತ್ತಿತ್ತು. ಊಟದಲ್ಲಿ ಯಾವುದೇ ತೊಂದರೆ ನೀಡಿಲ್ಲ ಎಂಬುದಾಗಿ ಒಪಾಂಗ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಮಿರಾಮ್ ಜನವರಿ 12ರಂದು ತನ್ನ ಸ್ನೇಹಿತನ್ನು ಭೇಟಿ ಮಾಡಲು ಚೀನಾ ಗಡಿ ಲುಂಗ್ಟಾ ಜೋರ್ ಪ್ರದೇಶದ ಬಳಿ ಹೋಗಿದ್ದಾಗ ಆತನನ್ನು ಚೀನಾ ಸೇನೆ ಅಪಹರಿಸಿತ್ತು. ಭಾರತ ಆತನನ್ನು ಹುಡುಕಿ, ಮರಳಿ ದೇಶಕ್ಕೆ ಬಿಡುಗಡೆ ಮಾಡಬೇಕೆಂದು ಕೋರಿದಾಗ ಚೀನಾ ಸೇನೆ ಜನವರಿ 27 ರಂದು ಮಿರಾಮ್‌ನನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *