ಚೀನಾ ಸರ್ಕಾರವನ್ನು ಟೀಕಿಸಿದ್ದ ಜನಪ್ರಿಯ ಉದ್ಯಮಿ ಕಣ್ಮರೆ

Public TV
2 Min Read

ಬೀಜಿಂಗ್: ಕೊರೊನಾವನ್ನು ಆರಂಭದಲ್ಲೇ ಮಟ್ಟ ಹಾಕುವಲ್ಲಿ ವಿಫಲವಾಗಿದ್ದಕ್ಕೆ ಚೀನಾದ ಕಮ್ಯೂನಿಸ್ಟ್ ಸರ್ಕಾರವನ್ನು ಟೀಕಿಸಿದ್ದ ಜನಪ್ರಿಯ ಉದ್ಯಮಿ, ರಾಜಕೀಯ ನಾಯಕರೊಬ್ಬರು ಕಾಣೆಯಾಗಿದ್ದಾರೆ.

ಚೀನಾದ ಆಡಳಿತರೂಢ ಕಮ್ಯೂನಿಸ್ಟ್ ಪಕ್ಷದ ಸದಸ್ಯ, ಸರ್ಕಾರದ ನಿಯಂತ್ರಿತ ಹುವಾಯುವಾನ್ ರಿಯಲ್ ಎಸ್ಟೇಟ್ ಡೆವಲಪರ್ ಕಂಪನಿ ಮಾಜಿ ಉನ್ನತ ಅಧಿಕಾರಿ ರೆನ್ ಝೆಕಿಯಾಂಗ್ ಪರೋಕ್ಷವಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:  ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ಗೆದ್ದಿದ್ದೇವೆ – ವುಹಾನ್‍ನಲ್ಲಿ ವೈದ್ಯರ ಸಂಭ್ರಮ

ಕಳೆದ ಗುರುವಾರದಿಂದ ಇವರು ಕಾಣೆಯಾಗಿದ್ದಾರೆ ಎಂದು ಸ್ನೇಹಿತರು ತಿಳಿಸಿದ್ದು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಮೆರಿಕದ ಮಿಲಿಟರಿ ವುಹಾನ್‍ನಲ್ಲಿ ಕೊರೊನಾ ವೈರಸ್ ತಂದಿರಬಹುದು – ಚೀನಾ

ರೆನ್ ಝೆಕಿಯಾಂಗ್ ಒಂದು ಪ್ರಬಂಧ ಬರೆದಿದ್ದು, ಈ ಪ್ರಬಂಧ ಬಳಕೆದಾರರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿತ್ತು. ಈ ಪ್ರಬಂಧದಲ್ಲಿ ಎಲ್ಲಿಯೂ ಚೀನಾ ಅಧ್ಯಕ್ಷರ ಹೆಸರನ್ನು ಬಹಿರಂಗವಾಗಿ ಉಲ್ಲೇಖಿಸಿರಲಿಲ್ಲ. ಪ್ರಬಂಧದಲ್ಲಿ ಚೀನಾದಲ್ಲಿ ಮಾಧ್ಯಮಗಳಿಗೆ ಸ್ವಾತಂತ್ರ್ಯವಿಲ್ಲ. ಸ್ವಾತಂತ್ರ್ಯ ಸಿಕ್ಕಿದರೆ ಇಷ್ಟೊಂದು ಗಂಭೀರ ಸಮಸ್ಯೆ ಸೃಷ್ಟಿಯಾಗುತ್ತಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಬೆತ್ತಲೆಯಾಗಿರುವ ಹಾಸ್ಯಗಾರನೊಬ್ಬ ಚಕ್ರವರ್ತಿಯಾಗಲು ಹೊರಟಿದ್ದಾನೆ. ವೈರಸ್ ಬಗ್ಗೆ ಆರಂಭದಲ್ಲಿ ಮಾಹಿತಿ ಸಿಕ್ಕಿತ್ತು. ಆದರೆ ಸರ್ಕಾರ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಮೇಲೆ ಸೆನ್ಸರ್ ಮಾಡಿದ್ದ ಕಾರಣ ಎಲ್ಲಿಯೂ ಚರ್ಚೆ ಆಗಲಿಲ್ಲ. ಇದರ ಗಂಭೀರತೆ ಜನರಿಗೆ ತಿಳಿಯದ ಪರಿಣಾಮ ಈಗ ದುಬಾರಿ ಬೆಲೆ ತೆರಬೇಕಾಗಿದೆ ಎಂದು ತಿಳಿಸಿದ್ದರು.

ಚೀನಾದ ಟ್ವಿಟ್ಟರ್ ಎಂದೇ ಪ್ರಸಿದ್ಧಿ ಪಡೆದಿರುವ ವೈಬೋದಲ್ಲಿ ರೆನ್ ಝೆಕಿಯಾಂಗ್ ಬಹಳ ಸಕ್ರಿಯವಾಗಿದ್ದರು. 3 ಕೋಟಿ ಜನರು ಇವರ ಖಾತೆಯನ್ನು ಫಾಲೋ ಮಾಡುತ್ತಿದ್ದರು. ಆದರೆ ಸರ್ಕಾರದ ವಿರುದ್ಧ ಸುಳ್ಳು ಮಾಹಿತಿಗಳನ್ನು ಪ್ರಸಾರ ಮಾಡುತ್ತಿದ್ದಾರೆ ಎನ್ನುವ ಆರೋಪದ ಮೇರೆಗೆ ಚೀನಾ ಸರ್ಕಾರ ಇವರ ಖಾತೆಯನ್ನು ಈ ಹಿಂದೆ ರದ್ದುಗೊಳಿಸಿತ್ತು.

ರೆನ್ ಝೆಕಿಯಾಂಗ್ ಸಾರ್ವಜನಿಕರ ರಂಗದಲ್ಲಿ ಬಹಳ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಅವರಿಗೆ ಏನಾದರೂ ಆದರೆ ಅದಕ್ಕೆ ಸರ್ಕಾರವೇ ಹೊಣೆ. ಬೀಜಿಂಗ್ ಪೊಲೀಸರ ಜೊತೆ ನಾಪತ್ತೆಯಾದ ವಿಚಾರದ ಬಗ್ಗೆ ಪ್ರಶ್ನಿಸಿದರೆ ಯಾವುದೇ ಉತ್ತರ ನೀಡಿಲ್ಲ ಎಂದು ಅವರ ಸ್ನೇಹಿತರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಚೀನಾದಿಂದ ಭಾರತಕ್ಕೆ ಬಂದು ರೋಗ ಹರಡಲು ಇಷ್ಟವಿಲ್ಲ- ಕಾಳಜಿ ಮೆರೆದ ಕನ್ನಡಿಗ

Share This Article
Leave a Comment

Leave a Reply

Your email address will not be published. Required fields are marked *