ನವದೆಹಲಿ: ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಸೋಮವಾರ ಸಂಜೆ ದೆಹಲಿಯಲ್ಲಿ ಎಸ್.ಜೈಶಂಕರ್ ಅವರನ್ನು ಭೇಟಿಯಾದರು. ಮೂರು ವರ್ಷಗಳ ಬಳಿಕ ವಾಂಗ್ ಯಿ ಮೊದಲ ಭೇಟಿ ಇದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಚೀನಾ ವಿದೇಶಾಂಗ ಸಚಿವ ಭೇಟಿಯಾಗಲಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸುಂಕಗಳಿಂದ ಹೊಡೆತಕ್ಕೆ ಸಿಲುಕಿರುವ ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಮುರಿದ ಸಂಬಂಧ ಸರಿಯಾಗುವ ಸುಳಿವು ಸಿಕ್ಕಂತಾಗಿದೆ.
ಗಡಿ ಮತ್ತು ಪ್ರಾದೇಶಿಕ ಭದ್ರತಾ ದೃಷ್ಟಿಕೋನದಿಂದ ವಾಂಗ್ ಯಿ ಅವರ ಭಾರತ ಭೇಟಿ ಮತ್ತು ಪ್ರಧಾನಿಯವರ ಚೀನಾ ಪ್ರವಾಸವು ಮಹತ್ವದ್ದಾಗಿದೆ. ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿನ ದೀರ್ಘಕಾಲದ ವಿವಾದಗಳಿಗೆ ಯಾವುದೇ ಶಾಂತಿಯುತ ಪರಿಹಾರಕ್ಕೆ ದಾರಿ ಸಹಕಾರಿಯಾಗುವ ಸಾಧ್ಯತೆ ಇದೆ.
ಚೀನಾ ಸಚಿವರ ಭೇಟಿಯು ಸ್ಥಗಿತಗೊಂಡ ಗಡಿ ವಿವಾದ ಪರಿಹಾರ ಕಾರ್ಯವಿಧಾನಗಳನ್ನು ಪುನರಾರಂಭಿಸಲು ಮಾತ್ರವಲ್ಲದೆ, ಕೋವಿಡ್ ಸಾಂಕ್ರಾಮಿಕದ ಆರಂಭಿಕ ದಿನಗಳಲ್ಲಿ ನಿಲ್ಲಿಸಲಾದ ಮತ್ತು ಲಡಾಖ್‌ನಲ್ಲಿನ ಹಿಂಸಾಚಾರದ ನಂತರ ಸ್ಥಗಿತಗೊಂಡಿದ್ದ ವೀಸಾಗಳು ಹೀಗೆ ಹಲವು ಕ್ರಮಗಳಿಗೆ ಸಹಕಾರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.