ಅಮೆರಿಕದ ಹೆಚ್‌-1ಬಿ ವೀಸಾಗೆ ಟಕ್ಕರ್‌ ಕೊಡಲು ಬರ್ತಿದೆ ಚೀನಾದ ಕೆ-ವೀಸಾ; ಭಾರತೀಯರಿಗೆ ಲಾಭ?

Public TV
5 Min Read

‘ಅಮೆರಿಕ ಮೊದಲು’ ಎನ್ನುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾಗೆ (H-1B Visa) ಹೊಸ ನಿಯಮ ರೂಪಿಸಿ, ತನ್ನ ದೇಶಕ್ಕೆ ಹೆಚ್ಚಾಗಿ ಬರುತ್ತಿದ್ದ ವಿದೇಶಿ ಪ್ರತಿಭೆಗಳ ನಿರ್ಬಂಧಕ್ಕೆ ಮುಂದಾಗಿದ್ದಾರೆ. ಹೆಚ್-1ಬಿ ವೀಸಾ ಶುಲ್ಕವನ್ನು ಹೆಚ್ಚಿಸಿದ್ದು, ಅಮೆರಿಕದಲ್ಲಿ ಕೆಲಸ ಮಾಡಿ ಹೆಚ್ಚು ಹಣ ಸಂಪಾದಿಸಬೇಕೆಂಬ ವಿದೇಶಿ ಟೆಕ್ಕಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ. ಟ್ರಂಪ್ ನಿಲುವಿನಿಂದ ಭಾರತ, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಹೊಡೆತ ಬಿದ್ದಿದೆ. ಈಗ ಅಮೆರಿಕಗೆ ಟಕ್ಕರ್ ಕೊಡಲು ಚೀನಾ ‘ಕೆ-ವೀಸಾ’ (K Visa) ಜಾರಿಗೆ ಸಿದ್ಧತೆ ನಡೆಸಿದೆ. ಯುಎಸ್ ಬೇಡ, ನಮ್ಮ ದೇಶಕ್ಕೆ ಬನ್ನಿ.. ಒಳ್ಳೆಯ ಉದ್ಯೋಗಾವಕಾಶ ನೀಡುತ್ತೇವೆಂದು ವಿದೇಶಗಳ ಪರಿಣತರಿಗೆ ಆಹ್ವಾನ ನೀಡಲು ಡ್ರ್ಯಾಗನ್ ರಾಷ್ಟ್ರ ಮುಂದಾಗಿದೆ. ಈ ಬೆಳವಣಿಗೆ ಜಾಗತಿಕ ಪ್ರತಿಭಾ ಸ್ಪರ್ಧೆಯಲ್ಲಿ ನಾಟಕೀಯ ತಿರುವು ಪಡೆದುಕೊಂಡಿದೆ. ಏನಿದು ಕೆ ವೀಸಾ? ಇದು ಯಾವಾಗ ಜಾರಿಯಾಗುತ್ತೆ? ಇದರ ಉದ್ದೇಶ ಏನು? ಭಾರತೀಯರಿಗೆ ಇದರಿಂದ ಲಾಭ ಇದ್ಯಾ? ಮೊದಲಾದ ಪ್ರಶ್ನೆಗಳಿಗೆ ಇಲ್ಲಿದೆ ವಿವರ.

ಯುಎಸ್ ವರ್ಸಸ್ ಚೀನಾ
H-1B ವೀಸಾಗಳಿಗೆ 100,000 ಡಾಲರ್ ಶುಲ್ಕವನ್ನು ಟ್ರಂಪ್ ವಿಧಿಸಿದ್ದಾರೆ. ಅಮೆರಿಕದ ವೀಸಾ ನೀತಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಆದರೂ, ಚೀನಾ ಪ್ರಪಂಚದಾದ್ಯಂತದ ಅತ್ಯುತ್ತಮ ಪ್ರತಿಭೆಗಳನ್ನು ಸ್ವಾಗತಿಸುತ್ತದೆ ಎಂದು ಹೇಳಿದೆ. ಅದಕ್ಕೆ ಕೆ-ವೀಸಾ ಜಾರಿಗೆ ಕ್ರಮವಹಿಸಿದೆ. ಅದನ್ನು ಹೊರತರುವ ಪ್ರಕ್ರಿಯೆಯಲ್ಲಿದೆ. ಪ್ರವೇಶ-ನಿರ್ಗಮನ ನಿಯಮಗಳಿಗೆ ಹೊಸ ತಿದ್ದುಪಡಿಗಳ ಮೂಲಕ ದೇಶದ 13 ನೇ ಸಾಮಾನ್ಯ ವೀಸಾವಾಗಿ ಕೆ-ವೀಸಾವನ್ನು ಚೀನಾ ಪರಿಚಯಿಸಲಿದೆ. STEM (Science, technology, engineering, and mathematics) ಕ್ಷೇತ್ರದಲ್ಲಿ ಕನಿಷ್ಠ ಪದವಿ ಹೊಂದಿರುವ, ಸಂಶೋಧನೆ, ಶಿಕ್ಷಣ ಅಥವಾ ತಂತ್ರಜ್ಞಾನ ನಾವೀನ್ಯತೆಯಲ್ಲಿ ತೊಡಗಿಸಿಕೊಂಡಿರುವ ವಿದೇಶಿ ಯುವ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತಿಭೆಗಳಿಗೆ ಈ ವೀಸಾದಡಿ ಅವಕಾಶ ಸಿಗಲಿದೆ. ಇದನ್ನೂ ಓದಿ: ಅಮೆರಿಕದ H-1B ವೀಸಾ ಹೊಡೆತ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಸ್ವಾಗತ

ಏನಿದು ಕೆ-ವೀಸಾ?
ಚೀನಾದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ವೀಸಾ ವರ್ಗಗಳಿಗೆ ಹೋಲಿಸಿದರೆ, ಕೆ-ವೀಸಾ ಭಿನ್ನವಾಗಿರಲಿದೆ. ಈ ವೀಸಾ ಹೊಂದಿರುವವರು ಬಹು ವಲಯಗಳಿಗೆ ಪ್ರವೇಶ, ವಿಸ್ತೃತ ಮಾನ್ಯತೆ ಮತ್ತು ದೀರ್ಘಾವಧಿಯ ವಾಸ್ತವ್ಯಗಳನ್ನು ಆನಂದಿಸಬಹುದು. ಇದರ ವ್ಯಾಪ್ತಿಯು ವ್ಯಾಪಕವಾದ ಚಟುವಟಿಕೆಗಳನ್ನು ಒಳಗೊಂಡಿದೆ. ಉದ್ಯಮಶೀಲತೆ, ವ್ಯವಹಾರ, ಶೈಕ್ಷಣಿಕ ಸಂಶೋಧನೆ ಮತ್ತು ಸಾಂಸ್ಕೃತಿಕ ಅಥವಾ ವೈಜ್ಞಾನಿಕ ಕ್ಷೇತ್ರ ಇದರ ವ್ಯಾಪ್ತಿಗೆ ಬರುತ್ತವೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಸಂಶೋಧನೆಯಲ್ಲಿ ಯುವ ವೃತ್ತಿಪರರನ್ನು ಆಕರ್ಷಿಸಲು ಚೀನಾದ ಕೆ-ವೀಸಾವನ್ನು ಜಾರಿಗೆ ತರುತ್ತಿದೆ. ಅಂತರರಾಷ್ಟ್ರೀಯ ಪ್ರತಿಭೆಗಳು ಚೀನಾದಲ್ಲಿ ಶೈಕ್ಷಣಿಕ, ಸಂಶೋಧನೆ ಮತ್ತು ಉದ್ಯಮಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಸುಲಭಗೊಳಿಸುವ ಮೂಲಕ ಅದರ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಚೀನಾ ಸರ್ಕಾರದ ಉದ್ದೇಶವಾಗಿದೆ.

ಹೊಸ ವೀಸಾ ಜಾರಿ ಯಾವಾಗ?
ಕೆ-ವೀಸಾ ಇದೇ ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಇದರ ಅರ್ಹತಾ ಮಾನದಂಡಗಳನ್ನು ಚೀನಾದ ಅಧಿಕಾರಿಗಳು ಇನ್ನೂ ಅಂತಿಮಗೊಳಿಸಿಲ್ಲ. ಆದರೆ, ಪ್ರಮುಖ ಷರತ್ತುಗಳನ್ನು ಒಳಗೊಂಡಿರುತ್ತವೆ. ಮಾನ್ಯತೆ ಪಡೆದ ಸಂಸ್ಥೆಯಿಂದ STEM ಪದವಿ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಅಥವಾ ಗಣಿತ), ಸಂಶೋಧನೆ ವಲಯದವರಿಗೆ ವೀಸಾ ಸಿಗಲಿದೆ. ಅಸ್ತಿತ್ವದಲ್ಲಿರುವ ಅನೇಕ ಕೆಲಸದ ವೀಸಾಗಳಿಗಿಂತ ಇದು ಭಿನ್ನ. ಆದರೆ, ವಯಸ್ಸಿನ ಮಿತಿ, ವಾಸ್ತವ್ಯದ ಅವಧಿ, ದೀರ್ಘಾವಧಿಯ ನಿವಾಸ ಅಥವಾ ಶಾಶ್ವತ ಪೌರತ್ವಕ್ಕೆ ಮಾರ್ಗಗಳು ಮತ್ತು ಉದ್ಯಮದ ವಿವರಗಳನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ. ಇದನ್ನೂ ಓದಿ: PublicTV Explainer: ಭಾರತದ ಯುವ ಪ್ರತಿಭೆಗಳಿಗೆ ಅಮೆರಿಕ ವೀಸಾ ತಡೆಗೋಡೆ?; ಏನಿದು H-1B ವೀಸಾ ಹೊಸ ರೂಲ್ಸ್‌?

ಜಾಗತಿಕ ಪ್ರತಿಭಾ ಸಮರ
ಅಮೆರಿಕವು ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ತನ್ನ ವೀಸಾ ಮಾನದಂಡಗಳನ್ನು ಬಿಗಿಗೊಳಿಸುತ್ತಿರುವ ಸಮಯದಲ್ಲಿ ಚೀನಾ ಕೆ-ವೀಸಾವನ್ನು ಅನಾವರಣಗೊಳಿಸುತ್ತಿದೆ. ಅಮೆರಿಕದ ನಿಲುವು ಜಾಗತಿಕ ವೃತ್ತಿಪರರಲ್ಲಿ ಆತಂಕವನ್ನುಂಟುಮಾಡುತ್ತಿದೆ. 100,000 ಡಾಲರ್ H-1B ವೀಸಾ ಶುಲ್ಕವು ವಿದೇಶಿ ತಾಂತ್ರಿಕ ಪ್ರತಿಭೆಗಳು ಮತ್ತು ಸಣ್ಣ ನವೋದ್ಯಮಗಳಿಗೆ ನಿರುತ್ಸಾಹಗೊಳಿಸುತ್ತಿದೆ ಎಂದು ಟೀಕಿಸಲಾಗಿದೆ. ಆದರೆ, ಈಗ ಚೀನಾದ ಕೆ-ವೀಸಾ ವಲಸೆ ವೃತ್ತಿಪರರನ್ನು ಮಾತ್ರವಲ್ಲದೆ ಪ್ರಪಂಚದಾದ್ಯಂತದ ಪರಿಣತ ಯುವ ಮನಸ್ಸುಗಳನ್ನು ಆಕರ್ಷಿಸಲು ಸಕಾಲಿಕ. ವಿಶೇಷವಾಗಿ ಭಾರತಕ್ಕೆ ಇದು ವರದಾನವಾಗುವ ಸಾಧ್ಯತೆ ಇದೆ. ಭಾರತದ ಪದವೀಧರರು US ತಂತ್ರಜ್ಞಾನ ವಲಯದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಚೀನಾದ ವೀಸಾವು ಸ್ಪರ್ಧೆ ಮತ್ತು ಅವಕಾಶ ಎರಡನ್ನೂ ಪ್ರತಿನಿಧಿಸುತ್ತದೆ.

ಇತರ ಚೀನಾ ಕೆಲಸದ ವೀಸಾಗಳಿಗಿಂತ ಹೇಗೆ ಭಿನ್ನ?
ಇದು ವಿದೇಶಿ ವಿಜ್ಞಾನಿಗಳು, ಸಂಶೋಧಕರು ಮತ್ತು ತಂತ್ರಜ್ಞರು ಸ್ಥಳೀಯ ಉದ್ಯೋಗದಾತ ಕಂಪನಿಗಳ ಅಗತ್ಯವಿಲ್ಲದೆ ಚೀನಾದಲ್ಲಿ ವಾಸಿಸಲು, ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಸಾಂಪ್ರದಾಯಿಕ ಚೀನೀ ಕೆಲಸದ ವೀಸಾಗಳಿಗಿಂತ ಭಿನ್ನವಾಗಿದೆ. ಕೆ-ವೀಸಾಕ್ಕೆ ಉದ್ಯೋಗದಾತ ಕಂಪನಿ ಅಥವಾ ಅಧಿಕೃತ ಆಹ್ವಾನದ ಅಗತ್ಯವಿಲ್ಲ. ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸುವ ಚೀನಾದ ಕಾರ್ಯತಂತ್ರದ ಭಾಗವಾಗಿ ಕೆ-ವೀಸಾ ಇರಲಿದೆ.

ಭಾರತೀಯ STEM ಪದವೀಧರರು ಚೀನಾದ ಕೆ-ವೀಸಾಕ್ಕೆ ಅರ್ಜಿ ಸಲ್ಲಿಸಬಹುದೇ?
ಹೌದು, ಜಾಗತಿಕ ತಂತ್ರಜ್ಞಾನ ಕಾರ್ಯಪಡೆಯ ದೊಡ್ಡ ಭಾಗವಾಗಿರುವ ಭಾರತೀಯ STEM ಪದವೀಧರರು ಕೆ-ವೀಸಾಕ್ಕೆ ಪ್ರಮುಖ ಅರ್ಜಿದಾರರಾಗುವ ನಿರೀಕ್ಷೆಯಿದೆ. ಸಂಶೋಧನೆ ಮತ್ತು ನಾವೀನ್ಯತೆ ವೃತ್ತಿಗಳಿಗಾಗಿ US ಮತ್ತು ಯುರೋಪ್‌ಗೆ ಪರ್ಯಾಯಗಳನ್ನು ಹುಡುಕುತ್ತಿರುವ ಭಾರತೀಯ ವೃತ್ತಿಪರರಿಗೆ ಈ ಯೋಜನೆ ಅವಕಾಶಗಳನ್ನು ತೆರೆಯುತ್ತದೆ. ಇದನ್ನೂ ಓದಿ: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?

ಚೀನಾ ಬಳಿ ಈಗಾಗಲೇ ಇರೋ ವೀಸಾಗಳ್ಯಾವುವು?
ಚೀನಾದಲ್ಲಿ ನಾಲ್ಕು ಬಗೆಯ ವೀಸಾಗಳಿವೆ. 1) ರಾಜತಾಂತ್ರಿಕ ವೀಸಾ, 2) ಸುವ್ಯವಹಾರ ವೀಸಾ, 3) ಸೇವಾ ವೀಸಾ, 4) ಸಾಮಾನ್ಯ ವೀಸಾ. ಈ ಸಾಮಾನ್ಯ ವೀಸಾಗಳನ್ನು 16 ವರ್ಗಗಳಾಗಿ ವಿಂಗಡಿಸಲಾಗಿದೆ. L – ಪ್ರವಾಸಿ, M – ವ್ಯವಹಾರ, F – ವ್ಯವಹಾರೇತರ, X – ಅಧ್ಯಯನ, Z – ಕೆಲಸ ಹೀಗೆ ವಿವಿಧ ಉದ್ದೇಶಗಳಿಗಾಗಿ ವರ್ಗೀಕರಣ ಮಾಡಲಾಗಿದೆ. ಈ ವೀಸಾಗಳಿಗೂ ಭಿನ್ನವಾಗಿ ಕೆ-ವೀಸಾ ಜಾರಿಗೊಳಿಸಲು ಚೀನಾ ಚಿಂತನೆ ನಡೆಸಿದೆ. ಅಕ್ಟೋಬರ್‌ನಲ್ಲಿ ಕೆ-ವೀಸಾ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಚೀನಾ ಸರ್ಕಾರ, ಡಿಜಿಟಲ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ಗಳನ್ನು ಹೊರತರಲು ಯೋಜಿಸಿದೆ.

70 ಕ್ಕೂ ಹೆಚ್ಚು ದೇಶಗಳಿಗೆ ಚೀನಾಗೆ ವೀಸಾ ಮುಕ್ತ ಪ್ರವೇಶ!
74 ದೇಶಗಳ ನಾಗರಿಕರು ಈಗ ವೀಸಾ ಇಲ್ಲದೇ 30 ದಿನಗಳವರೆಗೆ ಚೀನಾಕ್ಕೆ ಪ್ರವೇಶಿಸಬಹುದು. ವೀಸಾ ಮುಕ್ತ ಪ್ರಯಾಣವನ್ನು ವಿಸ್ತರಿಸುವ ಚೀನಾದ ಕ್ರಮವು ಪ್ರವಾಸೋದ್ಯಮ, ಆರ್ಥಿಕತೆ ಶಕ್ತಿಯನ್ನು ಹೆಚ್ಚಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಇದರಿಂದ ಪ್ರವಾಸಿ ತಾಣಗಳಿಗೆ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ. ಬೇಸಿಗೆ ರಜೆಗೆ ಚೀನಾಗೆ ಹೆಚ್ಚಾಗಿ ಧಾವಿಸುತ್ತಾರೆ. ಇದು ಸ್ಥಳೀಯ ಪ್ರವಾಸಿ ಕಂಪನಿಗಳು ಹಾಗೂ ಮಾರ್ಗದರ್ಶಿಗಳಿಗೆ ದೊಡ್ಡ ವರದಾನವಾಗಿದೆ.

Share This Article