ಪ್ರೇಮಿಗಳಿಗೆ ಅಡ್ಡಿಯಾಗಲಿಲ್ಲ ಹೆಮ್ಮಾರಿ ಕೊರೋನಾ

Public TV
1 Min Read

ಲಕ್ನೋ: ಕೊರೋನಾ ವೈರಸ್ ಆತಂಕದ ನಡುವೆ ಚೀನಾದ ಯುವತಿ ಭಾರತಕ್ಕೆ ಆಗಮಿಸಿ ತನ್ನ ಪ್ರಿಯಕರನೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದಾಳೆ.

ಉತ್ತರ ಪ್ರದೇಶದ ಯುವಕನ ಪ್ರೇಮ ವಿವಾಹಕ್ಕೆ ಕೊರೋನಾ ವೈರಸ್ ಎಂಬ ಹೆಮ್ಮಾರಿ ಅಡ್ಡಿಯಾಗಿಲ್ಲ. ಭಾರತ ಸರ್ಕಾರದ ಅನುಮತಿಯಿಂದಾಗಿ ಚೀನಾದ ಯುವತಿ ಪ್ರಿಯತಮನೊಂದಿಗೆ ಇಂದು ಸಾಂಸರಿಕ ಜೀವನಕ್ಕೆ ಕಾಲಿರಿಸಿದ್ದಾಳೆ. ಕಳೆದ ಏಳು ವರ್ಷಗಳಿಂದ ಉತ್ತರ ಪ್ರದೇಶದ ಯುವಕ ಚೀನಾದ ಯುವತಿಯನ್ನು ಪ್ರೀತಿಸುತ್ತಿದ್ದರು. ಕುಟುಂಬಸ್ಥರು ಸಹ ಇಬ್ಬರ ಮದುವೆಗೆ ಒಪ್ಪಿಗೆ ಸೂಚಿಸಿದ್ದರಿಂದ ಇಂದು ವಿವಾಹ ನಿಗದಿಯಾಗಿತ್ತು. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಚೀನಾದಿಂದ ಆಗಮಿಸುವವರ ವೀಸಾ ರದ್ದು ಮಾಡಿದ್ದರಿಂದ ಎರಡೂ ಕುಟುಂಬಗಳಲ್ಲಿ ಆತಂಕ ಮನೆ ಮಾಡಿತ್ತು.

ಯುವಕನ ಕುಟುಂಬಸ್ಥರು ಭಾರತ ಸರ್ಕಾರಕ್ಕೆ ವಿಶೇಷ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಯುವತಿಗೆ ವೀಸಾ ನೀಡಲಾಗಿತ್ತು. ಯುವತಿ ಆಗಮಿಸುತ್ತಿದ್ದಂತೆ ವೈದ್ಯರು ತಪಾಸಣೆಗೆ ಒಳಪಡಿಸಿ ಸೋಂಕು ಇಲ್ಲ ಎಂಬುವುದು ಖಚಿತವಾಗುತ್ತಿದ್ದಂತೆ ಪ್ರವೇಶ ಕಲ್ಪಿಸಿದ್ದಾರೆ. ವರನ ಕುಟುಂಬಸ್ಥರು ವಿಮಾನ ನಿಲ್ದಾಣಕ್ಕೆ ಆಗಮಿಸಿ ವಧುವನ್ನು ಬರಮಾಡಿಕೊಂಡರು.

ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದಾಗ ಉತ್ತರ ಪ್ರದೇಶದ ಯುವಕನಿಗೆ ಚೀನಿ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಸದ್ಯ ಯುವಕ ನ್ಯೂಯಾರ್ಕಿನಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಹೀಗಾಗಿ ಇಂದು ಮದುವೆ ನಿಶ್ಚಯವಾಗಿತ್ತು. ಯುವಕ ನ್ಯೂಯಾರ್ಕ್ ನಿಂದ ಫೆಬ್ರವರಿ 1ರಂದು ಭಾರತಕ್ಕೆ ಆಗಮಿಸಿದ್ದನು. ಎರಡು ದಿನಗಳ ನಂತರ ಫೆಬ್ರವರಿ ಮೂರರಂದು ಯುವತಿ ಭಾರತಕ್ಕೆ ಆಗಮಿಸಬೇಕಿತ್ತು. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಫೆಬ್ರವರಿ 3 ರಂದು ಭಾರತ ಸರ್ಕಾರ ಎಲ್ಲ ಚೀನಾ ಪ್ರವಾಸಿಗರ ವೀಸಾ ರದ್ದುಗೊಳಿಸಿತ್ತು

Share This Article
Leave a Comment

Leave a Reply

Your email address will not be published. Required fields are marked *