ವಿಶ್ವದ ಮೊದಲ ಥೋರಿಯಂ (Thorium) ಆಧಾರಿತ ಪರಮಾಣು ವಿದ್ಯುತ್ ಘಟಕವನ್ನು ನಿರ್ಮಿಸುವ ಮೂಲಕ ಚೀನಾ (China) ಮಹತ್ವದ ಸಾಧನೆ ಮಾಡಿದೆ. ಈ ವಿದ್ಯುತ್ ಘಟಕವನ್ನು ಚೀನಾದ ಗನ್ಸು ಪ್ರಾಂತ್ಯದ ವುಯಿ ನಗರದ ಗೋಬಿ ಮರುಭೂಮಿಯಲ್ಲಿ ಸ್ಥಾಪಿಸಲಾಗಿದೆ. ಥೋರಿಯಂ ಆಧಾರಿತ ಪರಮಾಣು ರಿಯಾಕ್ಟರ್ ಪರಿಕಲ್ಪನೆ ಏನು ಜಗತ್ತಿನಲ್ಲಿ ಹೊಸದಲ್ಲ. ಆದರೆ ಚೀನಾ ಅದನ್ನು ಮೊದಲು ಕಾರ್ಯಗತಗೊಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ.
ಸುಮಾರು 444 ಮಿಲಿಯನ್ ಡಾಲರ್ ವೆಚ್ಚದಲ್ಲಿ ಈ ಘಟಕವನ್ನು ಸ್ಥಾಪಿಸಲಾಗಿದೆ. 2023 ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯು ಎರಡು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ. 2011 ರಲ್ಲಿ ಈ ಥೋರಿಯಂ ವಿದ್ಯುತ್ ಉತ್ಪಾದನಾ ಯೋಜನೆಯನ್ನು ಚೀನಾ ಪ್ರಾರಂಭಿಸಿತ್ತು. ಈ ಸಾಧನೆಯ ಜೊತೆಗೆ ಚೀನಾ ಈಗ 10 ಮೆಗಾವ್ಯಾಟ್ ಥೋರಿಯಂ ಘಟಕ ನಿರ್ಮಿಸಲು ಮುಂದಾಗಿದೆ. ಇದನ್ನು 2030ರ ವೇಳೆಗೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
ಥೋರಿಯಂ ರಿಯಾಕ್ಟರ್‌ಗಳು ಯುರೇನಿಯಂಗೆ ಹೋಲಿಸಿದರೆ ಕಡಿಮೆ ವಿಕಿರಣಶೀಲ ತ್ಯಾಜ್ಯವನ್ನು ಉತ್ಪಾದಿಸುವುದರಿಂದ ಪ್ರಕೃತಿಗೆ ಅನುಕೂಲಕರವಾಗಿದೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ಥೋರಿಯಂನ ಇನ್ನೊಂದು ದೊಡ್ಡ ಉಪಯೋಗವೆಂದರೆ ಇದರಿಂದ ಪರಮಾಣು ಶಸ್ತ್ರಾಸ್ತ್ರಗಳಿಂದ ತಯಾರಿಸುವುದು ಕಷ್ಟ. ಇದು ಯುರೇನಿಯಂನ್ನು ವಿದ್ಯುತ್ ಘಟಕಕ್ಕೆ ಬಳಕೆ ಮಾಡುವುದನ್ನು ತಡೆಯುತ್ತದೆ. ಇದರಿಂದ ಶಸ್ತ್ರಾಸ್ತ್ರಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ದೊರೆಯುತ್ತದೆ.
ಭಾರತದಲ್ಲಿದೆ ವಿಶ್ವದ 25% ಥೋರಿಯಂ!
ಭಾರತದಲ್ಲಿ (India) ಥೋರಿಯಂ ಘಟಕದ ಪರಿಕಲ್ಪನೆ ಬಹಳ ಹಿಂದಿನಿಂದಲೂ ಇದೆ. ಥೋರಿಯಂ ಸ್ವತಃ ಪರಮಾಣು ಇಂಧನವಲ್ಲ, ಆದರೆ ರಿಯಾಕ್ಟರ್‌ಗಳಲ್ಲಿ ಬಳಸಲಾಗುವ ಯುರೇನಿಯಂ -233 ಆಗಿ ಪರಿವರ್ತಿಸಿ ಇದನ್ನು ಬಳಸಲಾಗುತ್ತದೆ. ಈ ಬಗ್ಗೆ ಭಾರತ 1950ರ ದಶಕದಲ್ಲಿ ಪ್ರಸಿದ್ಧ ಪರಮಾಣು ವಿಜ್ಞಾನಿ ಡಾ. ಹೋಮಿ ಜಹಾಂಗೀರ್ ಭಾಭಾ ಅವರ ನೇತೃತ್ವದಲ್ಲಿ ಪರಮಾಣು ಶಕ್ತಿಯ ಗಣನೀಯ ಪ್ರಗತಿಯನ್ನು ಸಾಧಿಸಿತ್ತು. ಭಾರತದಲ್ಲಿ ಸೀಮಿತ ಯುರೇನಿಯಂ ನಿಕ್ಷೇಪಗಳಿವೆ. ಆದರೆ ವ್ಯಾಪಕವಾದ ಥೋರಿಯಂ ನಿಕ್ಷೇಪಗಳನ್ನು ಹೊಂದಿದೆ. ಇವುಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸುವುದು ಭಾಭಾ ಅವರ ಕನಸಾಗಿತ್ತು.
ಇತ್ತೀಚೆಗೆ, ಭಾರತವು ಥೋರಿಯಂ ಮೇಲೆ ತನ್ನ ಗಮನವನ್ನು ಕೇಂದ್ರಿಕರಿಸಿದೆ. ಯಾಕೆಂದರೆ ವಿಶ್ವದ 25% ರಷ್ಟು ಥೋರಿಯಂ ನಿಕ್ಷೇಪಗಳು ಭಾರತದಲ್ಲಿವೆ. ಇನ್ನೂ 2050ರ ವೇಳೆಗೆ ವಿದ್ಯುತ್‌ನಲ್ಲಿ 30% ರಷ್ಟು ಥೋರಿಯಂ ಆಧಾರಿತ ರಿಯಾಕ್ಟರ್‌ಗಳಿಂದ ಉತ್ಪಾದಿಸುವ ಗುರಿಯನ್ನು ನಮ್ಮ ದೇಶ ಹೊಂದಿದೆ.
ಭಾರತದ ನಂತರ ಥೋರಿಯಂ ಯೋಜನೆ ಆರಂಭಿಸಿದ್ದ ಚೀನಾ
ಚೀನಾ ತನ್ನ ಥೋರಿಯಂ ರಿಯಾಕ್ಟರ್ ಯೋಜನೆಯನ್ನು ಭಾರತದ ನಂತರ ಪ್ರಾರಂಭಿಸಿತ್ತು. ಅಂದರೆ 1970ರ ದಶಕದಲ್ಲಿ ಪ್ರಾರಂಭಿಸಿತ್ತು. ಆದರೆ ಭಾರತ 1950ರ ದಶಕದಲ್ಲೇ ಈ ಪರಿಕಲ್ಪನೆಯ ಬಗ್ಗೆ ಯೋಚಿಸಿತ್ತು. ಅಮೆರಿಕವು 1960ರ ದಶಕದಲ್ಲಿ 7.4 ಮೆಗಾವ್ಯಾಟ್ ಥೋರಿಯಂ ರಿಯಾಕ್ಟರ್‌ನ್ನು ಪ್ರಯೋಗಿಸಿತ್ತು. ಜರ್ಮನಿಯು 1970 ಮತ್ತು 1980 ರ ದಶಕಗಳಲ್ಲಿ ಥೋರಿಯಂ ರಿಯಾಕ್ಟರ್ ಸಂಶೋಧನೆ ನಡೆಸಿತ್ತು. ಕೆನಡಾ, ನಾರ್ವೆ, ಜಪಾನ್, ಡೆನ್ಮಾರ್ಕ್ ಮತ್ತು ನೆದರ್‌ಲ್ಯಾಂಡ್ಸ್ ಸಹ ಇದೇ ರೀತಿಯ ಪ್ರಯತ್ನಗಳನ್ನು ಮಾಡಿದ್ದವು.
ಚೀನಾಗೆ 60,000 ವರ್ಷ ವಿದ್ಯುತ್ ಸಮಸ್ಯೆ ಇರಲ್ಲ!
ಚೀನಾ ತನ್ನ ಇಂಧನ ಅಗತ್ಯಗಳನ್ನು ಶಾಶ್ವತವಾಗಿ ಪೂರೈಸಿಕೊಳ್ಳಬಹುದಾದ ಬೃಹತ್ ಥೋರಿಯಂ ನಿಧಿಯನ್ನು ಹೊಂದಿದೆ. ಚೀನಾದಲ್ಲಿ ನಡೆದ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, 60,000 ವರ್ಷಗಳಿಗೆ ಸಾಕಾಗುವಷ್ಟು ಥೋರಿಯಂ ನಿಕ್ಷೇಪ ಹೊಂದಿದೆ ಎಂದು ವರದಿಯಾಗಿದೆ.
ಥೋರಿಯಂ ಎಂದರೇನು?
ಥೋರಿಯಂ ಬೆಳ್ಳಿ ಬಣ್ಣದ ಲೋಹವಾಗಿದೆ. ಇದರಿಂದ ಯುರೇನಿಯಂಗಿಂತ 200 ಪಟ್ಟು ಹೆಚ್ಚು ಶಕ್ತಿಯನ್ನು ಉತ್ಪಾದಿಸಬಹುದಾಗಿದೆ. ಯುರೇನಿಯಂ ರಿಯಾಕ್ಟರ್‌ಗಳಿಗಿಂತ ಭಿನ್ನವಾಗಿ, ಥೋರಿಯಂ ರಿಯಾಕ್ಟರ್‌ನ್ನು ನೀರಿನಿಂದ ತಂಪಾಗಿಸುವ ಅಗತ್ಯವಿಲ್ಲ. ಇದು ಕಡಿಮೆ ಪ್ರಮಾಣದ ವಿಕಿರಣಶೀಲ ತ್ಯಾಜ್ಯವನ್ನು ಬಿಡುಗಡೆ ಮಾಡುತ್ತವೆ. ಅಪರೂಪದ ಅದಿರುಗಳಿಂದ ಥೋರಿಯಂನ್ನು ಬೇರ್ಪಡಿಸಲು ಅಪಾರ ಪ್ರಮಾಣದ ಆಮ್ಲ ಮತ್ತು ಶಕ್ತಿಯ ಅಗತ್ಯವಿರುತ್ತದೆ. 1 ಗ್ರಾಂ ಥೋರಿಯಂ ಅನ್ನು ಶುದ್ಧೀಕರಿಸಲು ಅಪಾರ ಪ್ರಮಾಣದ ನೀರು ಬೇಕಾಗುತ್ತದೆ.