ಜ್ಯೂಸ್ ಎಂದು ವಿಷ ಕುಡಿದ ಮಕ್ಕಳ ಪ್ರಕರಣಕ್ಕೆ ಟ್ವಿಸ್ಟ್- ಪೊಲೀಸ್ ಠಾಣೆ ಮೆಟ್ಟಿಲೇರಿದ ತಂದೆ

Public TV
2 Min Read

– ಮಣ್ಣು ಮಾಡಿದ ಶವಗಳ ಪರೀಕ್ಷೆಗೆ ಮುಂದಾದ ಪೊಲೀಸರು

ಯಾದಗಿರಿ: ಜ್ಯೂಸ್ ಎಂದು ಇಬ್ಬರು ಕಂದಮ್ಮಗಳು ವಿಷ ಸೇವಿಸಿದ್ದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ಬೇಧಿಸುವಂತೆ ಮಕ್ಕಳ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಫೆಬ್ರವರಿ 25 ರಂದು ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಕೋಡಾಲ್ ಗ್ರಾಮದಲ್ಲಿ ಮಕ್ಕಳಿಬ್ಬರು ಸಾವನ್ನಪ್ಪಿದ್ದರು. ಆದರೆ ಮರಣೋತ್ತರ ಪರೀಕ್ಷೆ ಮಾಡದೇ 2 ವರ್ಷದ ಖೈರಾನ್ ಬಿ ಹಾಗೂ 4 ತಿಂಗಳ ಮಗು ಅಪ್ಸಾನಾ ಶವವನ್ನು ಹಾಗೇ ಹೂಳಲಾಗಿತ್ತು. ಮಕ್ಕಳು ಜಿಲ್ಲಾಸ್ಪತ್ರೆಗೆ ದಾಖಲಾದರೂ, ಮರಣೋತ್ತರ ಪರೀಕ್ಷೆ ಮಾಡದೇ ಮಕ್ಕಳ ಮೃತ ದೇಹಗಳನ್ನು ಪಾಲಕರಿಗೆ ನೀಡಲಾಗಿತ್ತು. ಪೊಲೀಸರು ಸಹ ಯಾವುದೇ ಪ್ರಕರಣ ದಾಖಲಿಸಿಕೊಳ್ಳದೆ, ಕೈ ತೊಳೆದುಕೊಂಡಿದ್ದರು.

ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಘಟನೆ ನಡೆದು ಮೂರು ದಿನಗಳ ಬಳಿಕ ಸ್ವತಃ ಮಕ್ಕಳ ತಂದೆ ಗೋರೆಸಾಬ್ ತನ್ನ ಮಕ್ಕಳ ಸಾವಿನ ರಹಸ್ಯ ಬೇಧಿಸುವಂತೆ, ಎಸ್‍ಪಿಗೆ ದೂರು ನೀಡಿದ್ದಾರೆ. ಮಕ್ಕಳ ತಾಯಿ ಶಹನಾಹಾಜ್ ಹೇಳುವ ಪ್ರಕಾರ ತನ್ನ 2 ವರ್ಷದ ಮಗು ಖೈರಾನ್ ಹಾಗೂ 4 ತಿಂಗಳ ಅಪ್ಸಾನ ಕಟ್ಟೆಯ ಮೇಲೆ ಆಟವಾಡುತ್ತಿದ್ದಾಗ ಜ್ಯೂಸ್ ಎಂದು ಭಾವಿಸಿ ಅಲ್ಲಿಯೇ ಇದ್ದ ಕ್ರಿಮಿನಾಶಕವನ್ನು ಕುಡಿದಿದ್ದರು. ನಂತರ ಮಕ್ಕಳ ನರಳಾಟ ನೋಡದೆ ತಾನೂ ಸಹ ವಿಷ ಕುಡಿದಿರುವುದಾಗಿ ಮಕ್ಕಳ ತಾಯಿ ಹೇಳಿಕೆ ನೀಡಿದ್ದರು.


ನಂತರ ಊರಿನ ಕೆಲ ಪ್ರಮುಖರು ಮಧ್ಯಸ್ಥಿಕೆ ವಹಿಸಿ ಪ್ರಕರಣ ದಾಖಲಿಸಬಾರದು ಎಂದು ಮನವಿ ಮಾಡಿದರು. ಈ ಮನವಿಗೆ ಮಣಿದ ವಡಗೇರಾ ಪೊಲೀಸರು ಕೇಸ್ ಮಾಡದೆ, ತಾಯಿ ಹೇಳಿಕೆ ನಿಜವೆಂದು, ಮಕ್ಕಳ ದೇಹವನ್ನು ಆಸ್ಪತ್ರೆಯಿಂದ ನೇರವಾಗಿ ಕುಟುಂಬಸ್ಥರಿಗೆ ಒಪ್ಪಿಸಿದ್ದರು. ಆದರೆ ಶಹನಾಹಾಜ್ ಮನೆಯಲ್ಲಿ ಕೆಲ ಕೌಟುಂಬಿಕ ಜಗಳವಿದ್ದು, ಮನನೊಂದ ಶಹನಾಹಾಜ್ ತಾನು ವಿಷ ಕುಡಿದು ಮಕ್ಕಳಿಗೆ ಕುಡಿಸಿದ್ದಾಳೆ. ದುರದೃಷ್ಟವಶಾತ್ ತಾಯಿ ಬದುಕುಳಿದು ಪುಟ್ಟ ಕಂದಮ್ಮಗಳು ಜೀವ ಕಳೆದುಕೊಂಡಿವೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಮಕ್ಕಳ ತಂದೆ ದೂರು ನೀಡಿದ್ದು, ಪ್ರಕರಣವನ್ನು ರೀ ಓಪನ್ ಮಾಡಲಾಗಿದೆ. ಈ ಕೇಸನ್ನು ಗಂಭೀರವಾಗಿ ಪರಿಗಣಿಸಿರುವ ಯಾದಗಿರಿ ಜಿಲ್ಲಾ ಪೋಲಿಸ್ ತಂಡ, ಎಸಿ ಶಂಕರಗೌಡ, ತಹಶೀಲ್ದಾರ್ ಸುರೇಶ್ ನೇತೃತ್ವದಲ್ಲಿ ಮಣ್ಣು ಮಾಡಿದ ಶವಗಳನ್ನು ಹೊರ ತೆಗೆದು ಶವ ಪರೀಕ್ಷೆಗೆ ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *