ಬಾಲ್ಯ ಸ್ನೇಹಿತನ ಸಾವು ಊಹಿಸಿಕೊಳ್ಳಲಾಗುತ್ತಿಲ್ಲ- ಬಹ್ರೇನ್‍ನಲ್ಲಿ ಮೋದಿ ಭಾವುಕ ಭಾಷಣ

Public TV
2 Min Read

– ಹೃದಯ ತೀವ್ರ ದುಃಖತಪ್ತವಾಗಿದೆ

ಮನಮಾ: ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಬಹ್ರೇನ್‍ನಲ್ಲಿ ಭಾಷಣ ಮಾಡುವಾಗ ಭಾವುಕರಾಗಿದ್ದು, ವಿದ್ಯಾರ್ಥಿ ಜೀವನದಿಂದಲೂ ನಾವಿಬ್ಬರೂ ಒಟ್ಟಿಗೆ ಬಂದಿದ್ದೇವೆ, ರಾಜಕೀಯದಲ್ಲೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಸಾವನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ ಎಂದು ಬಹ್ರೇನ್‍ನಲ್ಲಿ ಭಾವುಕ ಭಾಷಣ ಮಾಡಿದ್ದಾರೆ.

ಶನಿವಾರ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಬಹ್ರೇನ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ 15 ಸಾವಿರಕ್ಕೂ ಅಧಿಕ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ವಿದ್ಯಾರ್ಥಿ ಜೀವನದಿಂದಲೂ ಇಬ್ಬರೂ ಒಟ್ಟಿಗೆ ಕಳೆದ ಕ್ಷಣಗಳನ್ನು ಹಂಚಿಕೊಳ್ಳುವ ಮೂಲಕ ಭಾವುಕರಾಗಿದ್ದಾರೆ.

ನಾನು ಕರ್ತವ್ಯಕ್ಕೆ ಬದ್ಧನಾಗಿರುವ ಮನುಷ್ಯ, ಬಹ್ರೇನ್‍ನಲ್ಲಿ ಉತ್ಸಾಹದ ವಾತಾವರಣವಿರುವಾಗ, ನಮ್ಮ ದೇಶದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿರುವ ಸಂದರ್ಭದಲ್ಲಿ ಬಾಲ್ಯ ಸ್ನೇಹಿತನನ್ನು ಕಳೆದುಕೊಂಡ ನನ್ನ ಹೃದಯ ತೀವ್ರ ದುಃಖತಪ್ತವಾಗಿದೆ. ವಿದ್ಯಾರ್ಥಿ ದೆಸೆಯಿಂದಲೂ ಸ್ನೇಹಿತರಿದ್ದೆವು. ಸಾರ್ವಜನಿಕ ಜೀವನದಲ್ಲಿ ನನ್ನೊಂದಿಗೆ ಒಟ್ಟಿಗೆ ಹೆಜ್ಜೆ ಹಾಕಿದ ಸ್ನೇಹಿತ, ಇಬ್ಬರೂ ಒಟ್ಟಿಗೆ ರಾಜಕೀಯ ಪಯಣ ಆರಂಭಿಸಿದ್ದೆವು. ನಾನು ಎಲ್ಲ ಸಮಯದಲ್ಲೂ ಅವರೊಂದಿಗೆ ಸಂಪರ್ಕದಲ್ಲಿದ್ದೆ. ಅವರೊಂದಿಗೆ ನಾನು ಹೋರಾಟಗಳನ್ನು ಎದುರಿಸಿದ್ದೇನೆ, ನಾನು ಕಂಡಿದ್ದ ಕನಸುಗಳನ್ನು ಈಡೇರಿಸಿದ್ದ ಆ ನನ್ನ ಸ್ನೇಹಿತ ಅರುಣ್ ಜೇಟ್ಲಿ, ದೇಶದ ಮಾಜಿ ಹಣಕಾಸು ಸಚಿವರು ನಿಧನರಾಗಿದ್ದಾರೆ ಎಂದು ಭಾವುಕ ಭಾಷಣವನ್ನು ಮಾಡಿದ್ದಾರೆ.

ಇದನ್ನು ನಾನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ನಾನು ಇಲ್ಲಿದ್ದೇನೆ. ಆದರೆ, ನನ್ನ ಸ್ನೇಹಿತ ನಮ್ಮನ್ನು ಬಿಟ್ಟು ಅಗಲಿದ್ದಾನೆ. ಆಗಸ್ಟ್ ತಿಂಗಳಲ್ಲಿ ನನ್ನ ಸಹೋದರಿ ಸುಷ್ಮಾ ಸ್ವರಾಜ್ ಅವರನ್ನು ಕಳೆದುಕೊಂಡಿದ್ದೇವೆ. ಇದೀಗ ನನ್ನ ಸ್ನೇಹಿತ ಅರುಣ್ ಜೇಟ್ಲಿಯನ್ನು ಕಳೆದುಕೊಂಡಿದ್ದೇನೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್, ಯುಎಇ ಹಾಗೂ ಬಹ್ರೇನ್ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಯುಎಇ ಭೇಟಿ ನಂತರ ಬಹ್ರೇನ್‍ಗೆ ಆಗಮಿಸಿದ್ದು, ಯುಎಇನ ಅಬುಧಾಬಿಯ ರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಅರುಣ್ ಜೇಟ್ಲಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜೇಟ್ಲಿ ಅವರ ಕುಟುಂಬದೊಂದಿಗೆ ಮಾತನಾಡಿ ಸಂತಾಪ ಸೂಚಿಸಿದ್ದಾರೆ. ಆಗ ಜೇಟ್ಲಿ ಅವರ ಕುಟುಂಬದವರು ವಿದೇಶದಲ್ಲಿ ತಾವು ಭಾಗಿಯಾಗಿರುವ ಕಾರ್ಯಕ್ರಮಗಳನ್ನು ಮೊಟಕುಗೊಳಿಸದಂತೆ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅರುಣ್ ಜೇಟ್ಲಿ ಅವರು ಮಾಜಿ ಹಣಕಾಸು ಸಚಿವರಾಗಿದ್ದು, ಅಲ್ಲದೆ, ಬಿಜೆಪಿಯ ಟ್ರಬಲ್ ಶೂಟರ್ ಆಗಿದ್ದರು. ಉಸಿರಾಟದ ತೊಂದರೆಯಿಂದ ಅರುಣ್ ಜೇಟ್ಲಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಅವರು ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಹಲವು ಗಣ್ಯರು ಅರುಣ್ ಜೇಟ್ಲಿ ಅವರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದಾರೆ. ಇಂದು ಅವರ ಅಂತ್ಯಸಂಸ್ಕಾರ ನೆರವೇರಲಿದೆ.

Share This Article
Leave a Comment

Leave a Reply

Your email address will not be published. Required fields are marked *