ಬೆಂಗಳೂರು: ಕೇವಲ 20 ದಿನದ ಮಗುವನ್ನು ತಾಯಿಯ ಎದುರಲ್ಲೇ ಅದರ ತಂದೆಯೇ ಬರ್ಬರವಾಗಿ ಕೊಲೆಗೈದ ಆಘಾತಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಗೋಕುಲ್ ಮಗುವನ್ನು ಕೊಂದ ಪಾಪಿ ತಂದೆ. ಈತ ಹೆಣ್ಣು ಮಗು ಎಂಬ ಕಾರಣಕ್ಕೆ ಕೊಲೆಗೈದಿರುವುದಾಗಿ ತಿಳಿದುಬಂದಿದೆ. ಗುರುವಾರ ರಾತ್ರಿ ಸುಬ್ಬನಪಾಳ್ಯ ಬಳಿ ಈ ಘಟನೆ ನಡೆದಿದೆ. ಆರೋಪಿ ಗೋಕುಲ್ ನೇಪಾಳ ಮೂಲದವನಾಗಿದ್ದಾನೆ. ಬೆಂಗಳೂರಿಗೆ ಬಂದು ನೆಲೆಸಿದ್ದ ಈತ ಸ್ವಿಮ್ಮಿಂಗ್ ಪೂಲ್ ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದನು.
ನಿನ್ನೆ ಸಂಜೆ ಮನೆಯಲ್ಲಿ ಮಲಗಿದ್ದ ಮಗುವನ್ನು ತಾಯಿಯ ಮುಂದೆಯೇ ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ತಾಯಿ ತಡೆಯಲು ಮುಂದಾಗಿದ್ದಾರೆ. ಆದರೆ ಆತ ಬಾಣಂತಿಯನ್ನು ತಳ್ಳಿ ಮಗುವನ್ನು ಎತ್ತಿಕೊಂಡು ಗೋಡೆಗೆ ಬಿಸಾಕಿದ್ದಾನೆ. 20 ದಿನದ ಮಗುವಾದ್ದರಿಂದ ಗೋಡೆಗೆ ಹೊಡೆದ ಪರಿಣಾಮ ಮಗು ಸ್ಥಳದಲ್ಲಿಯೇ ಅಸುನೀಗಿದೆ.
ಘಟನೆಯ ಬಳಿಕ ಪತಿ ವಿರುದ್ಧ ಸ್ವತಃ ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪತ್ನಿಯ ದೂರು ಸ್ವೀಕರಿಸಿರುವ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಗೋಕುಲ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv