ಕೊರೊನ ಭೀತಿ – ತೋಟದಲ್ಲಿ ಶಾಸಕರ ಮಗಳ ಸರಳ ಮದುವೆ

Public TV
1 Min Read

– ಸರ್ಕಾರದ ಆದೇಶ ಸ್ವಾಗತಿಸಿದ ಕೈ ನಾಯಕ

ಚಿಕ್ಕಮಗಳೂರು: ದಿನದಿಂದ ದಿನಕ್ಕೆ ವ್ಯಾಪಿಸುತ್ತಿರುವ ಕೊರೊನ ವೈರಸ್ ಹಾಗೂ ಸರ್ಕಾರದ ಆದೇಶದ ಹಿನ್ನೆಲೆ ಜಿಲ್ಲೆಯ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಕೂಡ ತಮ್ಮ ಮಗಳ ಮದುವೆಯನ್ನು ಸರಳವಾಗಿ ಆಚರಿಸಲು ಮುಂದಾಗಿದ್ದಾರೆ.

ಇದೇ 19ರಂದು ನಗರದ ಒಕ್ಕಲಿಗ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮದುವೆ ಮಾಡಲು ನಿರ್ಧರಿಸಿದ್ದರು. ಈಗಾಗಲೇ 12 ಸಾವಿರಕ್ಕೂ ಅಧಿಕ ಲಗ್ನಪತ್ರಿಕೆಗಳನ್ನು ಸಹ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಹಂಚಿದ್ದಾರೆ. ಆದರೆ ಈಗ ಕೊರೊನಾ ವೈರಸ್ ಭೀತಿ ಹಾಗೂ ಸರ್ಕಾರದ ಆದೇಶದ ಹಿನ್ನೆಲೆ ಸರಳ ಮದುವೆಗೆ ಎರಡು ಕುಟುಂಬದವರು ಮುಂದಾಗಿದ್ದಾರೆ.

ನಗರದಲ್ಲಿ ಮಾತನಾಡಿದ ಶಾಸಕ ರಾಜೇಗೌಡ, ತಮ್ಮ ಮಗಳು ಹಾಗೂ ಕಾಫಿ ಬೆಳೆಗಾರ ಅತ್ತಿಕಟ್ಟೆ ಜಗನ್ನಾಥ್‍ರವರ ಮಗನೊಂದಿಗೆ ನಿಶ್ಚಯವಾಗಿದ್ದ ಮದುವೆಯನ್ನ ಸರಳವಾಗಿ ಬಂಧುಗಳ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ಸ್ವಗೃಹ ಬಾಸಾಪುರದ ಕಾಫಿ ತೋಟದಲ್ಲಿ ನಡೆಯಲಿದೆ. ನಿಗದಿಯಾಗಿದ್ದ ದಿನದಂದೇ ನಡೆಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು. ರಾಜೇಗೌಡ ಮಗಳು ಡಾ.ಸಂಜನಾ ಮತ್ತು ಅತ್ತಿಕಟ್ಟೆ ಜಗನ್ನಾಥ್ ಪುತ್ರ ವಚನ್‍ಲಕ್ಷ್ಮಣ್ ರವರ ವಿವಾಹ ಮಹೋತ್ಸವ ಇದೇ ಮಾರ್ಚ್ 19ಕ್ಕೆ ನಿಗದಿಯಾಗಿತ್ತು.

ಮದುವೆ ಅಂಗವಾಗಿ ಮಾ. 16ರಂದು ನಡೆಯಬೇಕಾಗಿದ್ದ ದೇವತಾಕಾರ್ಯವನ್ನು ಮಾ 18ರ ಬುಧವಾರ ಹಾಗೂ ವಿವಾಹ ಮಹೋತ್ಸವನ್ನು ಮಾ 19ರ ಗುರುವಾರ ಬಾಸಾಪುರ ಎಸ್ಟೇಟಿನಲ್ಲಿ ಸರಳವಾಗಿ ಬಂಧುಗಳೊಂದಿಗೆ ನಡೆಸಲು ತೀರ್ಮಾನಿಸಿದ್ದಾರೆ. ಮಾ 21ರ ಶನಿವಾರ ಚಿಕ್ಕಮಗಳೂರು ಕ್ಲಬ್‍ನಲ್ಲಿ ಏರ್ಪಡಿಸಿದ್ದ ಆರತಕ್ಷತೆ ಕಾರ್ಯಕ್ರಮವನ್ನು ಕೊರೊನಾ ವೈರಸ್ ಕಾರಣದಿಂದ ಮುಂದೂಡಿದ್ದಾರೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ, ಈ ವಿವಾಹವನ್ನು ಸರಳವಾಗಿ ನಡೆಸಲು ನಿಶ್ಚಯಿಸಿದ್ದಾರೆ. ದೊಡ್ಡವರ ಈ ತೀರ್ಮಾನವನ್ನ ವಧುವರರಾದ ಸಂಜನಾ ಹಾಗೂ ವಚನ್‍ಲಕ್ಷ್ಮಣ್ ಕೂಡ ಸ್ವಾಗತಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *