ಕಾಯ್ದೆಯಾಗದೇ ಇದ್ರೂ ದ್ವೇಷ ಭಾಷಣ ಮಸೂದೆ ಹೆಸರಿನಲ್ಲಿ ಪೊಲೀಸರಿಂದ ನೋಟಿಸ್‌ – ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

2 Min Read

– ರಾಜ್ಯದಲ್ಲಿ ಇರುವುದು ಪ್ರಜಾಪ್ರಭುತ್ವನಾ, ಪೊಲೀಸ್ ರಾಜ್ಯಾನಾ
– ಶೋಭಾಯಾತ್ರೆ, ಹಿಂದೂ ಸಮಾಜೋತ್ಸವ ಮಾಡುವುದೂ ತಪ್ಪೇ?

ಬೆಂಗಳೂರು/ಚಿಕ್ಕಮಗಳೂರು: ಮಸೂದೆ ಕಾಯ್ದೆ ಆಗದೇ ಇದ್ದರೂ ಪೊಲೀಸರು ದ್ವೇಷ ಭಾಷಣ ಮಸೂದೆ – 2025ರ ಅಡಿ ಬಿಜೆಪಿ (BJP) ಮುಖಂಡ ವಿಕಾಸ್ ಪುತ್ತೂರು (Vikas Puttur) ನೋಟಿಸ್‌ ನೀಡಿರುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ (BJP) ನಾಯಕರು ಕರ್ನಾಟಕದಲ್ಲಿ ಇರುವುದು ಪ್ರಜಾಪ್ರಭುತ್ವನಾ, ಪೊಲೀಸ್ ರಾಜ್ಯಾನಾ (Police State) ಎಂದು ಪ್ರಶ್ನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?
ಚಿಕ್ಕಮಗಳೂರಿನ ತರಿಕೇರೆ ಪೊಲೀಸರು ನೀಡಿದ ನೋಟಿಸಿನಲ್ಲಿ ಭಾಷಣ ಮಾಡುವ ಸಮಯದಲ್ಲಿ ಅನ್ಯ ಕೋಮಿನ ಸಮುದಾಯದವರ ಭಾವನೆಗಳಿಗೆ ದಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು. ತಾವು ಮಾಡುವ ಭಾಷಣವು ಯಾವುದೇ ಗುಂಪಿನ ವಿರುದ್ಧ ದ್ವೇಷ ಹಿಂಸೆ ಪ್ರಚೋದನೆಗೆ ಒಳಪಡಬಾರದು. ಶೋಭಾಯಾತ್ರೆಯ ಸಮಯದಲ್ಲಿ ತಾವುಗಳು ತರೀಕೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕಾರ್ಯಕ್ರಮಮ ಹಮ್ಮಿಕೊಂಡಿದ್ದು ಶಾಂತ ರೀತಿಯಲ್ಲಿ ಸಾರ್ವಜನಿಕರಿಗೆ ಮತ್ತು ಸುಗುಮ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದು. ಘನ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ದ್ವೇಷ ಭಾಷಣ ಮಸೂದೆ-2025 ಅನ್ವಯ ಕಾಯ್ದೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ನೆಡೆಸಿಕೊಂಡು ಹೋಗುವುದು. ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಲ್ಲೇಖಿಸಲಾಗಿದೆ.  ಇದನ್ನೂ ಓದಿ: Public TV Explainer | ಟೋಲ್‌ ಶುಲ್ಕ ಬಾಕಿ ಉಳಿಸಿಕೊಂಡ್ರೆ NOC ಸಿಗಲ್ಲ, ವಾಹನ ಮಾರೋಕಾಗಲ್ಲ – ಹೊಸ ನಿಯಮ ಹೇಳುವುದೇನು?


ಅಶೋಕ್‌ ಕಿಡಿ:
ಕರ್ನಾಟಕದಲ್ಲಿ ಇರುವುದು ಪ್ರಜಾಪ್ರಭುತ್ವನಾ, ಪೊಲೀಸ್ ರಾಜ್ಯಾನಾ? ರಾಜ್ಯಪಾಲರ ಅಂಕಿತ ಬೀಳದೆ, ರಾಜ್ಯ ಸರ್ಕಾರದ ಗೆಜೆಟ್ ನಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳದೆ ಒಂದು ಮಸೂದೆ ಕಾನೂನಾಗುವುದಿಲ್ಲ ಎನ್ನುವ ಕನಿಷ್ಠ ಜ್ಞಾನ ಸ್ವಯಂಘೋಷಿತ ಸಂವಿಧಾನ ತಜ್ಞರು, ವಕೀಲರೂ ಆಗಿರುವ ಸಿಎಂ ಸಿದ್ದರಾಮಯ್ಯನವರಿಗೆ ಅವರಿಗೆ ಇಲ್ಲವೇ?

ಇನ್ನೂ ಅಧಿಕೃತವಾಗಿ ಜಾರಿಯೇ ಆಗದ ಒಂದು ಮಸೂದೆಯನ್ನು ಉಲ್ಲೇಖಿಸಿ ಪೊಲೀಸರು ವಿಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಾರೆ ಎಂದರೆ ರಾಜ್ಯದಲ್ಲಿ ಪೊಲೀಸ್ ಕಚೇರಿಗಳು ಹೇಗೆ ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿವೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

ಕೇಸರಿ, ಕುಂಕುಮ ಎಂದರೆ ದ್ವೇಷ ಕಾರುವ ಕಾಂಗ್ರೆಸ್‌ ಪಕ್ಷ ಪಕ್ಷ, ಹಿಂದೂಗಳ, ಹಿಂದೂ ಧರ್ಮದ ಬಗ್ಗೆ ಎಷ್ಟು ಪೂರ್ವಗ್ರಹ ಪೀಡಿತವಾಗಿದೆ ಎಂದರೆ ರಾಜ್ಯದಲ್ಲಿ ಮುಕ್ತವಾಗಿ ಗಣೇಶ ವಿಸರ್ಜನೆ ಮೆರವಣಿಗೆ ಮಾಡುವುದು ತಪ್ಪು, ಶೋಭಾಯಾತ್ರೆ, ಹಿಂದೂ ಸಮಾಜೋತ್ಸವ ಮಾಡುವುದೂ ತಪ್ಪು ಎನ್ನುವ ಪರಿಸ್ಥಿತಿ ತಂದಿಟ್ಟಿದೆ. ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವನ್ನ ಸ್ವಾಭಿಮಾನಿ ಕನ್ನಡಿಗರು ಕಿತ್ತೊಗೆಯುವ ದಿನ ಬಹಳ ದೂರವಿಲ್ಲ.

Share This Article