ದಂಪತಿಯ ಬಾಯಿಗೆ ಬಟ್ಟೆ ತುರುಕಿ, ಪ್ಲಾಸ್ಟರ್ ಹಾಕಿ ಸಿನಿಮಾ ಶೈಲಿಯಲ್ಲಿ ದರೋಡೆ

Public TV
2 Min Read

– 20 ಕಳ್ಳರಿಂದ ಬಾಗಿಲು ಮುರಿದು ಕಳ್ಳತನ

ಚಿಕ್ಕಮಗಳೂರು: ಮನೆಯಲ್ಲಿದ್ದ ದಂಪತಿ ಬಾಯಿಗೆ ಬಟ್ಟೆ ತುರುಕಿ ಪ್ಲಾಸ್ಟರ್ ಹಾಕಿ, ಕೈಗಳನ್ನು ಕಟ್ಟಿಹಾಕಿ ಎರಡು ಗಂಟೆಗಳ ಕಾಲ ಮನೆಯನ್ನು ಸಂಪೂರ್ಣವಾಗಿ ಶೋಧಿಸಿ ದರೋಡೆ ಮಾಡಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಗುಡ್ಡೆತೋಟದ ವಿಜಯರಾಘವರ ಮನೆಗೆ ಶನಿವಾರ ಬೆಳಗ್ಗಿನ ಜಾವ 12.30ರ ವೇಳೆಗೆ 20 ಜನರ ತಂಡ ಎರಡು ಗಂಟೆಗಳ ಕಾಲ ಸರ್ಚ್ ಮಾಡಿ ಹಣ-ಚಿನ್ನಾಭರಣ ಸೇರಿ ಅಂದಾಜು 15 ಲಕ್ಷ ಹಣವನ್ನು ದೋಚಿದ್ದಾರೆ. ಈ ಸಿನಿಮಾ ಶೈಲಿಯ ದರೋಡೆಯಿಂದ ಮಲೆನಾಡೇ ಬೆಚ್ಚಿಬಿದ್ದಿದೆ.

12 ಗಂಟೆ ಸುಮಾರಿಗೆ ಮನೆ ಬಳಿ ಬಂದ 20 ಜನ ಐನಾತಿ ದರೋಡೆಕೋರರು ಮನೆ ಮುಂದಿದ್ದ ಕಾರ್ಮಿಕ ಜಯಂತ್‍ನನ್ನು ಕಟ್ಟಿಹಾಕಿದ್ದಾರೆ. ಮನೆಯ ಮುಂಬಾಗಿಲ ಬಳಿ ಬಂದು ಬಾಗಿಲು ತೆಗೆಯುವಂತೆ ವಿಜಯರಾಘವ ದಂಪತಿಗೆ ಹೆದರಿಸಿದ್ದಾರೆ. ಬಾಗಿಲು ತೆಗೆಯಲು ನಿರಾಕರಿಸಿದ ದಂಪತಿಯ ಮಾತನ್ನೂ ಕೇಳದೆ ಕ್ಷಣಾರ್ಧದಲ್ಲಿ ಬಾಗಿಲನ್ನು ಒಡೆದು ಒಳ ನುಗ್ಗಿದ್ದಾರೆ.

ಬಾಗಿಲನ್ನು ಒಡೆದು ಎಂಟ್ರಿ ಕೊಟ್ಟ ತಂಡ, ಇಬ್ಬರನ್ನು ಪ್ಲಾಸ್ಟರ್ ಹಾಗೂ ಬಟ್ಟೆಯಿಂದ ಸುತ್ತಿ ಹಗ್ಗದಲ್ಲಿ ಕಟ್ಟಾಕಿದ್ದಾರೆ. ಬಳಿಕ ಒಬ್ಬೊಬ್ಬರು ಒಂದು ರೂಮ್‍ಗೆ ಹೋಗಿ 2.15ರವರೆಗೆ ಇಡೀ ಮನೆ ಶೋಧಿಸಿ ಸಿಕ್ಕಿದ್ದನ್ನೆಲ್ಲಾ ಬಾಚಿಕೊಂಡು, ಯಾವುದೇ ಸಾಕ್ಷಿ ಬಿಡದೆ ಎಸ್ಕೇಪ್ ಆಗಿದ್ದಾರೆ. ದುರುಳರು ಹೋಗುವಾಗಲೂ ವಿಜಯರಾಘವ ದಂಪತಿಯ ಕೈಕಾಲುಗಳನ್ನು ಬಿಚ್ಚಿದೇ ಹಾಗೇ ಹೋಗಿದ್ದಾರೆ.

ಈ ಮಧ್ಯೆ ದಂಪತಿಗೆ ಬಾತ್‍ರೂಮಿಗೆ ಹೋಗಲು ದರೋಡೆಕೋರರು ಅವಕಾಶ ಮಾಡಿಕೊಟ್ಟಿದ್ದಾರೆ. ನೆಲದಲ್ಲಿ ಮಲಗಿದ್ದ ದಂಪತಿಗೆ ಚಳಿ ಎಂದು ಹಾಸಿಗೆ ಮೇಲೆ ಮಲಗಿಸಿದ್ದಾರೆ. ವಿಜಯರಾಘವ ಹಾಗೂ ಪತ್ನಿ ಕೊರಳಲ್ಲಿದ್ದ ಚಿನ್ನದ ಸರಗಳನ್ನು ಕಟ್ ಮಾಡಿ ಕೊಂಡೊಯ್ದಿದ್ದಾರೆ. ಗಾಡ್ರೆಜ್ ಒಡೆದು ಚಿನ್ನಾಭರಣ ಸೇರಿ ನಗದನ್ನು ದೋಚಿದ್ದಾರೆ. ಹೋಗುವಾಗ ಮನೆಯಲ್ಲಿದ್ದ ಮೂರು ಮೊಬೈಲ್ ಗಳನ್ನು ಎಸ್ಕೇಪ್ ಮಾಡಿದ್ದಾರೆ.

ವಿಷಯ ಕೇಳಿ ಖಾಕಿ ಪಡೆ ಗುಡ್ಡೆತೋಟದಲ್ಲೇ ಬೀಡುಬಿಟ್ಟಿದೆ. ಈ ಭಾಗದಲ್ಲಿ ಆಗಾಗ ಒಂಟಿ ಮನೆಗಳ ಮೇಲೆ ಕಳ್ಳರು ಕನ್ನ ಹಾಕಿದ್ದು, ಬಹುತೇಕ ಪ್ರಕರಣಗಳನ್ನ ಪೊಲೀಸ್ ಇಲಾಖೆ ಭೇದಿಸಿಯೇ ಇಲ್ಲ. ಈ ರೀತಿಯ ಪ್ರಕರಣಗಳು ಪುನರಾವರ್ತನೆಯಾಗಲು ಇದು ಒಂದು ಕಾರಣ ಅನ್ನೋದು ಸ್ಥಳೀಯರ ಆರೋಪವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *