ಅಮೆರಿಕದ ನ್ಯಾಷನಲ್ ಕ್ರಿಕೆಟ್ ಟೀಂನಲ್ಲಿ ಕಾಫಿನಾಡ ಪ್ರತಿಭೆ ನಾಸ್ತೋಶ್ ಕೆಂಜಿಗೆ

Public TV
2 Min Read

ಚಿಕ್ಕಮಗಳೂರು: ಅಮೆರಿಕದ ನ್ಯಾಷನಲ್ ಕ್ರಿಕೆಟ್ ಟೀಂನಲ್ಲಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ನಾಸ್ತೋಶ್ ಕೆಂಜಿಗೆ ಸ್ಥಾನ ಪಡೆದಿದ್ದು, ನಾಲ್ಕು ವರ್ಷಗಳಿಂದ ಅಮೆರಿಕಾ ತಂಡದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿದ್ದಾರೆ.

ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಪ್ರದೀಪ್ ಕೆಂಜಿಗೆ ಹಾಗೂ ಶೃತಿಕೀರ್ತಿ ದಂಪತಿಯ ಪುತ್ರನಾಗಿರೋ ನಾಸ್ತೋಶ್(31) ಹುಟ್ಟಿದ್ದು ಅಮೆರಿಕಾದಲ್ಲಾದರೂ, ಬೆಳೆದಿದ್ದು ಭಾರತದಲ್ಲೇ. ಚಿಕ್ಕಂದಿನಿಂದಲೂ ಕ್ರಿಕೆಟ್‍ನಲ್ಲಿ ಆಸಕ್ತಿ ಹೊಂದಿದ್ದ ನಾಸ್ತೋಶ್ ಕೆಂಜಿಗೆ ಗ್ರಾಮದ ತಮ್ಮ ಮನೆಯಂಗಳದಲ್ಲಿದ್ದ ಕಾಫಿ ಒಣಗಿಸುವ ಅಂಗಳದಲ್ಲೇ ಕ್ರಿಕೆಟ್ ಆಡೋಕೆ ಶುರು ಮಾಡಿದ್ದರು. ಅಪ್ಪನೇ ಬೌಲರ್. ಅಮ್ಮನೇ ವಿಕೆಟ್ ಕೀಪರ್. ನಾಸ್ತೋಶ್ ಬ್ಯಾಟ್ಸ್‍ಮನ್. ಹೀಗೆ ಕಾಫಿ ತೋಟದಲ್ಲಿ ಆರಂಭವಾದ ಅವರ ಕ್ರಿಕೆಟ್ ಪ್ರೇಮ ಅಮೆರಿಕ ತಲುಪಿದೆ.

ಸದ್ಯ ಆಡಿ ಬೆಳೆದ ಊರು ಚಿಕ್ಕಮಗಳೂರಿಗೆ ನಾಸ್ತೋಶ್ ಬಂದಿದ್ದಾರೆ. ಹೀಗೆ ಬಂದವರು ಪ್ರಾಕ್ಟಿಸ್ ಬಿಡಬಾರದು ಎಂದು ಚಿಕ್ಕಮಗಳೂರು ನಗರದ ರಾಣಾ ಸ್ಪೋರ್ಟ್ಸ್‌ ಕ್ಲಬ್ ಸದಸ್ಯರು ಹಾಗೂ ಸ್ನೇಹಿತರ ಜಿಲ್ಲಾ ಆಟದ ಮೈದಾನದಲ್ಲಿ ಬ್ಯಾಟಿಂಗ್-ಬೌಲಿಂಗ್ ಪ್ರಾಕ್ಟಿಸ್ ಮಾಡುತ್ತಿದ್ದಾರೆ.

ನಾಸ್ತೋಶ್ ಓದಿನ ಜೊತೆ 15 ವರ್ಷ ತಮಿಳುನಾಡು ಹಾಗೂ 10 ವರ್ಷ ಬೆಂಗಳೂರಿನ ಗಲ್ಲಿ ಹಾಗೂ ಕ್ಲಬ್‍ನಲ್ಲಿ ಕ್ರಿಕೆಟ್ ಆಡಿದ್ದಾರೆ. ಭಾರತೀಯ ತಂಡದ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್ ಜೊತೆ ಕ್ಲಬ್‍ನಲ್ಲಿ ಫೀಲ್ಡ್ ಶೇರ್ ಮಾಡಿದ್ದಾರೆ. ಆದರೆ ಭಾರತೀಯ ತಂಡದಲ್ಲಿ ಆಡಬೇಕೆಂಬ ಇವರ ಬಯಕೆ ಈಡೇರಲಿಲ್ಲ. ಕೆಲಸದ ನಿಮಿತ್ತ ಅಮೆರಿಕಕ್ಕೆ ಹೋದ ನಾಸ್ತೋಶ್ ಅಮೆರಿಕದ ಕ್ಲಬ್‍ವೊಂದರಲ್ಲಿ ಆಡುವಾಗ ಆಯ್ಕೆಗಾರರ ಕಣ್ಣಿಗೆ ಬಿದ್ದು ರಾಷ್ಟ್ರೀಯ ತಂಡ ಕೂಡಿಕೊಂಡಿದ್ದಾರೆ.

2017ರಿಂದಲೂ ಅಮೆರಿಕ ರಾಷ್ಟ್ರೀಯ ತಂಡದಲ್ಲಿ ನಾಸ್ತೋಶ್ ಶಾಶ್ವತ ಸದಸ್ಯನಾಗಿದ್ದಾರೆ. ಜೊತೆಗೆ ಹತ್ತಾರು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ್ದಾರೆ. 2021ರ ಟಿ20 ವಲ್ರ್ಡ್ ಕಪ್ ಅರ್ಹತಾ ಸುತ್ತಿನಲ್ಲಿ ಜಿಂಬಾಬ್ವೆ, ಸ್ಕಾಟ್‍ಲ್ಯಾಂಡ್, ನಮೀಬಿಯಾ ವಿರುದ್ಧ ಆಡಿದ್ದಾರೆ. ಇದನ್ನೂ ಓದಿ: ಹೋಂ ಐಸೋಲೇಷನ್‍ನಿಂದ ಕೆಲಸಕ್ಕೆ ಮರಳುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ: ತ್ರಿಲೋಕ್ ಚಂದ್ರ

ಸದ್ಯಕ್ಕೆ ಭಾರತಕ್ಕೆ ಬಂದಿರೋ ನಾಸ್ತೋಶ್, 2022ರ ಟಿ20 ವಲ್ರ್ಡ್ ಕಪ್ ಹಾಗೂ 2023ರ ಏಕದಿನ ವಲ್ರ್ಡ್ ಕಪ್ ತಂಡದಲ್ಲೂ ಆಡಲಿದ್ದಾರೆ. ಹಾಗಾಗಿ, ಚಿಕ್ಕಮಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇಂಟರ್‍ನ್ಯಾಷನಲ್ ಪ್ಲೇಯರ್‍ಗೆ ಬೌಲಿಂಗ್ ಮಾಡ್ತಿರೋ ಕಾಫಿನಾಡಿನ ರಾಣಾ ಸ್ಪೋಟ್ಸ್ ಕ್ಲಬ್ ತಂಡದ ಸದಸ್ಯರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ AAP ಅಧಿಕಾರಕ್ಕೆ ಬಂದ್ರೆ ಜನರ ಸಲಹೆ ಮೇರೆಗೆ ಬಜೆಟ್: ಅರವಿಂದ್ ಕೇಜ್ರಿವಾಲ್

Share This Article
Leave a Comment

Leave a Reply

Your email address will not be published. Required fields are marked *