ಆತ್ಮವಿಶ್ವಾಸದ ಪ್ರತೀಕವಾಗಿದ್ದ ಸಿದ್ಧಾರ್ಥಣ್ಣ ಆತ್ಮಹತ್ಯೆ ಮಾಡಿದ್ದನ್ನು ನಂಬಕ್ಕಾಗ್ತಿಲ್ಲ- ಸಿ.ಟಿ ರವಿ

Public TV
1 Min Read

– ಕಾಫಿ ಡೇ ನಿರ್ದೇಶಕರಲ್ಲಿ ವಿನಂತಿ

ಚಿಕ್ಕಮಗಳೂರು: ಸೋಮವಾರ ಸಂಜೆಯಿಂದ ಕಾಣೆಯಾಗಿದ್ದ ಕಾಫಿ ಸಾಮ್ರಾಟ ವಿ.ಜಿ ಸಿದ್ಧಾರ್ಥ್ ಅವರ ಮೃತದೇಹ ಇಂದು ಮಂಗಳೂರಿನ ಹೊಯಿಗೆ ಬಜಾರಿನಲ್ಲಿ ಪತ್ತೆಯಾಗಿದೆ. ಈ ಕುರಿತು ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರು ಸಂತಾಪ ಸೂಚಿಸಿದ್ದಾರೆ.

ವಿಡಿಯೋ ಮೂಲಕ ಮಾತನಾಡಿದ ಅವರು ಸಿದ್ಧಾರ್ಥಣ್ಣ ಕುಟುಂಬಕ್ಕೆ, ಅವರನ್ನೇ ನಂಬಿದ ಸಾವಿರಾರು ಜನರಿಗೆ ಹಾಗೂ ಅಭಿಮಾನಿಗಳಿಗೆ ಸಿದ್ಧಾರ್ಥಣ್ಣನ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದರು.

ಸಿಟಿ ರವಿ ಹೇಳಿದ್ದೇನು?:
ಸಿದ್ಧಾರ್ಥಣ್ಣ ತನ್ನ ಜೀವನದಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ, ಮಾಡಿಲ್ಲ. ಅವರಿಂದ ಇಂದು ಸಾವಿರಾರು ಜನ ಬದುಕು ಕಂಡುಕೊಂಡಿದ್ದಾರೆ. ಎಲ್ಲೋ ಬದುಕಿ ಬರಬಹುದೆಂಬ ವಿಶ್ವಾಸ ಇಂದು ಹುಸಿಯಾಗಿದೆ. ಸಿದ್ಧಾರ್ಥಣ್ಣ ಶವವಾಗಿ ಹೊರಗೆ ಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಾವಿರಾರು ಜನ ಜನಸಾಮಾನ್ಯರಿಗೆ ಮಾತ್ರವಲ್ಲ, ನನ್ನಂತವರಿಗೂ ಬೆನ್ನೆಲುಬಾಗಿ ನಿಂತು ನನ್ನ ರಾಜಕೀಯ ಬೆಳವಣಿಗೆಗೆ ಸಹಕರಿಸಿ ಬೆನ್ನು ತಟ್ಟಿದ್ದಾರೆ. ಅಲ್ಲದೆ ಆಗಾಗ ಪ್ರೊಫೈಲ್ ಚೆನ್ನಾಗಿ ಇಟ್ಟುಕೊಳ್ಳಬೇಕು ನಿಮಗೆಲ್ಲ ಭವಿಷ್ಯವಿದೆ. ಯಾವ ಕಾರಣಕ್ಕೂ ಹೆಸರು ಕೆಡಿಸಿಕೊಳ್ಳಬಾರದು ಎಂದು ಕರೆದು ಮಾತನಾಡುತ್ತಿದ್ದರು. ಇಂತಹ ಅಣ್ಣ ಇನ್ನಿಲ್ಲ ಎಂದು ನಂಬುವಂತಹ ಸ್ಥಿತಿಯಲ್ಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವರ ಬಗ್ಗೆ ಜಿಗುಪ್ಸೆ ತೋರಿಸುತ್ತಿದ್ದಂತಹ, ಆತ್ಮವಿಶ್ವಾಸದ ಪ್ರತೀಕವಾಗಿದ್ದಂತಹ ಸಿದ್ಧಾರ್ಥಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದೇ ನಂಬಕ್ಕಾಗದಿರುವಂತಹ ಸಂಗತಿಯಾಗಿದೆ ಎಂದಿದ್ದಾರೆ.

ನಾವು ಮಕ್ಕಳಿಗೂ ಸಿದ್ಧಾರ್ಥಣ್ಣನೇ ರೋಲ್ ಮಾಡೆಲ್, ಅವರಂತೆ ನೀವೂ ಆಗಿ ಎಂದು ಹೇಳುತ್ತಿದ್ದೆವು. ಸಾವಿರಾರು ಜನರಿಗೆ ಬದುಕು ಕೊಟ್ಟು ತನ್ನ ಬದುಕಿನ ಕಥೆಯನ್ನು ತಾನೇ ಮುಗಿಸಿಕೊಂಡ ಸಿದ್ಧಾರ್ಥಣ್ಣ ಇನ್ನಿಲ್ಲವಾಗಿದ್ದಾರೆ. ಅವರ ಕುಟುಂಬಕ್ಕೆ, ಅವರನ್ನೇ ನಂಬಿದ ಸಾವಿರಾರು ಜನರಿಗೆ, ಅಭಿಮಾನಿಗಳಿಗೆ ಸಿದ್ಧಾರ್ಥಣ್ಣನ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ಸಿದ್ಧಾರ್ಥಣ್ಣ ಆತ್ಮ ವಿಶ್ವಾಸದ ಪ್ರತೀಕವಾಗಿ ಮತ್ತೆ ಹುಟ್ಟಿ ಬರಬೇಕು. ಅವರು ಬೆಳೆಸಿದ ಕಾಫಿ ಡೇ ಕೊನೆಯಾಗಬಾರದು. ಅದನ್ನು ಮುನ್ನಡೆಸುವ ಕೆಲಸವನ್ನು ನಿರ್ದೇಶಕರು ಮಾಡಬೇಕು ಎಂದು ವಿನಂತಿಸಿಕೊಂಡರು.

https://www.youtube.com/watch?v=6uimTfq4xXo

Share This Article
Leave a Comment

Leave a Reply

Your email address will not be published. Required fields are marked *