ಮೊಮ್ಮಕ್ಕಳ ಗೆಲುವಿಗಾಗಿ ದೊಡ್ಡ ಗೌಡ್ರ ಪಣ- ಶೃಂಗೇರಿಯಲ್ಲಿ ಯಾಗ, ಯಜ್ಞ

Public TV
1 Min Read

ಚಿಕ್ಕಮಗಳೂರು: ಕುಟುಂಬ ರಾಜಕಾರಣ ಅನ್ನೋ ಮಾತಿಗೂ ಹೆದರದೆ, ದೋಸ್ತಿ ಸರ್ಕಾರದಲ್ಲಿ ಕುಸ್ತಿ ಮಾಡ್ತಾ ಮೊಮ್ಮಕ್ಕಳನ್ನು ಹೇಗಾದ್ರೂ ಮಾಡಿ ಗೆಲ್ಲಿಸಬೇಕೆಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಪಣ ತೊಟ್ಟಿದ್ದಾರೆ. ಅಧಿಕಾರದ ಮೊದಲು ಮತ್ತು ಅಧಿಕಾರ ಉಳಿಸಿಕೊಳ್ಳಲು ಶಾರದಾಂಬೆಯ ಸನ್ನಿಧಿಯಲ್ಲಿ ಕೈಮುಗೀತಿದ್ದ ದೇವೇಗೌಡ್ರು ಈಗ ಮೊಮ್ಮಕ್ಕಳ ಗೆಲುವಿಗಾಗಿ ಅದೇ ಸನ್ನಿಧಿಯಲ್ಲಿ ಚಂಡಿಕಾಯಾಗಕ್ಕೆ ಕೂತಿದ್ದಾರೆ.

ದೊಡ್ಡ ಗೌಡ್ರು ಮೈಸೂರಲ್ಲಿ, ಇಬ್ಬರು ಮೊಮ್ಮಕ್ಕಳಲ್ಲಿ ಓರ್ವ ಹಾಸನ ಮತ್ತೊಬ್ಬ ಮಂಡ್ಯದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಮೋದಿ ಅಲೆಯಲ್ಲಿ ಮೊಮ್ಮಕ್ಕಳ ರಾಜಕೀಯ ಭವಿಷ್ಯವನ್ನ ಓರೆಗಲ್ಲಿಗೆ ಹಚ್ಚಿರೋ ಗೌಡ್ರ ಕುಟುಂಬ ಲೋಕಸಭಾ ಚುನಾವಣೆಗೂ ಮುನ್ನ ಕುಟುಂಬದ ಇಷ್ಟದೈವ ಶೃಂಗೇರಿ ಶಾರದಾಂಬೆಯ ಮೊರೆ ಹೋಗಿದ್ದಾರೆ.

ಇಷ್ಟರವರೆಗೆ ಶೃಂಗೇರಿ ಶಾರದಾಂಬೆಯ ಸನ್ನಿಧಿಗೆ ಅಧಿಕಾರಕ್ಕಾಗಿ, ಅಧಿಕಾರದ ಉಳಿವಿಗಾಗಿ ಭೇಟಿ ನೀಡ್ತಿದ್ದ ಗೌಡ್ರ ಕುಟುಂಬ ಈಗ ಮೊಮ್ಮಕ್ಕಳನ್ನು ಗೆಲ್ಲಿಸಿಯೇ ತೀರುತ್ತೇವೆ ಎಂದು ಬೇಡಿಕೊಳ್ಳೋಕೆ ಯಾಗ ಯಜ್ಞ ಮಾಡ್ತಿದೆ. ಬುಧವಾರವೇ ಶೃಂಗೇರಿಗೆ ಬಂದಿರೋ ದೇವೇಗೌಡರ ಕುಟುಂಬ ಯಾಗಕ್ಕೆ ಸಂಕಲ್ಪ ಮಾಡಿಕೊಂಡಿದೆ. ಮಂಡ್ಯ ಲೋಕಸಭಾ ಅಭ್ಯರ್ಥಿಯಾಗಿರೋ ನಿಖಿಲ್ ಇದೇ ಮೊದಲ ಬಾರಿಗೆ ಅಪ್ಪ-ಅಮ್ಮನ ಜೊತೆ ಮಠಕ್ಕೆ ಬಂದು ಗೆಲುವಿಗಾಗಿ ಪ್ರಾರ್ಥಿಸಿಕೊಂಡಿದ್ದಾರೆ. ದೇವೇಗೌಡ, ಪತ್ನಿ ಚೆನ್ನಮ್ಮ, ಸಿಎಂ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್, ರೇವಣ್ಣ, ಭವಾನಿ ಹಾಗೂ ಪ್ರಜ್ವಲ್ ಚಂಡಿಕಾಯಾಗದಲ್ಲಿ ಪಾಲ್ಗೊಂಡಿದ್ದಾರೆ. ಇಂದು ಯಾಗದ ಪೂರ್ಣಾಹುತಿ ನಡೆಯಲಿದೆ.

ಗೌಡ್ರು ಮಂಡ್ಯದಲ್ಲಿ ಮೊಮ್ಮಗನನ್ನ ಗೆಲ್ಲಿಸಿಯೇ ಗೆಲ್ಲಿಸ್ತೀನಿ ಎಂದು ಶಪಥಗೈದಿದ್ದಾರೆ. ಸುಮಲತಾ ಸ್ವತಂತ್ರವಾಗಿ ನಿಂತ್ರೆ ನಾವು ಬೆಂಬಲ ಕೊಡ್ತೀವಿ ಅಂದ ಬಿಜೆಪಿಗೆ ಹಾಗೂ ಪರೋಕ್ಷವಾಗಿ ಸುಮಲತಾಗೂ ಟಾಂಗ್ ಕೊಡಲಿಕ್ಕೆ ಮೊಮ್ಮಗನನ್ನ ಕರೆತಂದು ಇಷ್ಟ ದೈವದ ಮುಂದೆ ಬೇಡಿಕೊಂಡಿದ್ದಾರೆ. ಮೈತ್ರಿ ಸರ್ಕಾರದ ಜಂಜಾಟ-ಹೊಡೆದಾಟದ ಮಧ್ಯೆಯೂ ಮಂಡ್ಯ-ಹಾಸನ ಬಿಡೋದಿಲ್ಲ ಎಂದು ಕಾಂಗ್ರೆಸ್ ಜೊತೆಗಿನ ತೆರೆಮರೆಯ ಮನಸ್ತಾಪದ ಮಧ್ಯೆಯೂ ಮೊಮ್ಮಕ್ಕಳ ರಾಜಕೀಯಕ್ಕೆ ಗೌಡ್ರು ಬುನಾದಿ ಹಾಕಹೊರಟಿದ್ದಾರೆ. ಆದ್ರೆ ಈ ಭೇಟಿಗೂ ರಾಜಕೀಯಕ್ಕೂ ಸಂಬಂಧವೇ ಇಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *