ಮಕ್ಕಳ ಭವಿಷ್ಯಕ್ಕಾಗಿ ಅಡಿಕೆ ತೋಟ ಬೆಳೆಸಿದ ಸರ್ಕಾರಿ ಶಾಲೆ – ವಿದ್ಯಾರ್ಥಿಗಳನ್ನ ವಿಮಾನದಲ್ಲಿ ಕರೆದೊಯ್ಯಬೇಕೆಂಬ ಆಸೆ

3 Min Read

ಚಿಕ್ಕಮಗಳೂರು: ವರ್ಷಕ್ಕೊಮ್ಮೆ ಬರುವ ಸಾಂಪ್ರಾದಾಯಿಕ ಹಬ್ಬಗಳಂತೆ ಪ್ರತಿವರ್ಷ ಇಷ್ಟಿಷ್ಟು ಅಂತ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುತ್ತಲೇ ಇದೆ. ಆದ್ರೆ, ಕಾಫಿನಾಡ ಕುಗ್ರಾಮ ಈ ಸರ್ಕಾರಿ ಶಾಲೆಗೆ (Government School) ಯಾವುದೇ ಕಾರಣಕ್ಕೂ ಬೀಗ ಬೀಳಲ್ಲ. ಯಾಕಂದ್ರೆ, 30 ಮನೆ-30 ಮಕ್ಕಳ ಈ ಕುಗ್ರಾಮದ ಸರ್ಕಾರಿ ಶಾಲೆ ಮಕ್ಕಳ ಭವಿಷ್ಯಕ್ಕಾಗಿ ಸ್ವಂತಕ್ಕೆ ಅಡಿಕೆ ತೋಟವನ್ನೇ ಬೆಳೆದಿದೆ.

ಯಾರ ಸಹಾಯ-ಅನುದಾನ-ಸಹಕಾರ ಇಲ್ಲದೇ ಮಕ್ಕಳನ್ನ ವಿಮಾನಯಾನದ ಮೂಲಕ ಟೂರ್ ಕರೆದುಕೊಂಡು ಹೋಗಬೇಕು ಅನ್ನೋದು ಇಲ್ಲಿನ ಶಿಕ್ಷಕರ ಆಸೆ. ಜೊತೆಗೆ, ಮಕ್ಕಳು ಶಾಲೆಗೆ ಸೇರಿದ ಮೇಲೆ ಅವರಿಂದ ಯಾವುದಕ್ಕೂ ಒಂದೇ ಒಂದು ರೂಪಾಯಿ ಹಣ ಕೇಳಬಾರದು ಅನ್ನೋದು ಅವರ ಅಂತರಾಳ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಕೇಸ್‌ – ಬಿ ರಿಪೋರ್ಟ್‌ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ED ಅರ್ಜಿ

ಹೌದು., 30 ಮನೆ 30 ಮಕ್ಕಳಿರೋ ಚಿಕ್ಕಮಗಳೂರು (Chikkamagaluru) ತಾಲೂಕಿನ ಶ್ರೀನಿವಾಸಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಅಭಿವೃದ್ಧಿ-ಭವಿಷ್ಯಕ್ಕಾಗಿಯೇ ಅಡಿಕೆ ತೋಟ (Areca Plant) ಬೆಳೆದಿದ್ದಾರೆ. ಶಾಲಾ ಅಭಿವೃದ್ಧಿಗೆ ಸಹಾಯ ಕೇಳಿದಾಗ ಒಬ್ಬೊಬ್ಬರು ಒಂದೊಂದು ಮಾತನಾಡ್ತಾರೆ ಎಂದು ಗ್ರಾಮ ಠಾಣಾ ಜಾಗವನ್ನ ಶಾಲೆ ಹೆಸರಿಗೆ ಮಾಡಿಸಿ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಮಕ್ಕಳಿಗಾಗಿ ತೋಟವನ್ನೇ ಬೆಳೆದಿದ್ದಾರೆ. ಇದನ್ನೂ ಓದಿ: ತಡರಾತ್ರಿ ಯುವತಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ BMTC ಸಿಬ್ಬಂದಿ, ರ‍್ಯಾಪಿಡೋ ಚಾಲಕ

ಸುಮಾರು 1 ಎಕರೆಯಲ್ಲಿ 312 ಅಡಿಕೆ-ತೆಂಗು ಹಾಕಿದ್ದು ಎರಡೂಮುಕ್ಕಾಲು ವರ್ಷಕ್ಕೆ ಅಡಿಕೆ ಹೊಂಬಾಳೆಯೊಡೆದಿದೆ. ಇನ್ನೆರಡು ವರ್ಷಗಳ ಬಳಿಕ ಪ್ರತಿ ವರ್ಷ 3-4 ಲಕ್ಷ ಆದಾಯ ಶಾಲೆಗೆ ಬರಲಿದೆ. ಅಡಿಕೆ ನೆಟ್ಟು ಕೊಟ್ಟ ಬಳಿಕ ಗ್ರಾಮಸ್ಥರೇ ತೋಟಕ್ಕೆ ನೀರಾಯಿಸಿ ಬೆಳೆಸಿ ಕೊಟ್ಟಿದ್ದಾರೆ. 1-5ನೇ ತರಗತಿವರೆಗೆ ಇರೋ ಈ ಪ್ರಾಥಮಿಕ ಶಾಲೆಗೆ ಸೇರೋ ಮಕ್ಕಳಿಂದ 5ನೇ ತರಗತಿ ಮುಗಿಯೋವರೆಗೂ ಯಾವುದಕ್ಕೂ ಒಂದೇ ರೂಪಾಯಿ ಕೇಳಬಾರದು. ಎಜುಕೇಶನ್, ಊಟ ಎಲ್ಲವನ್ನೂ ಖಾಸಗಿಯಂತೆ ಕ್ವಾಲಿಟಿಯಲ್ಲಿ ಕೊಡಬೇಕು ಅನ್ನೋದು ಇಲ್ಲಿನ ಶಿಕ್ಷಕರ ಆಸೆ.

ಒಂದೊಂದು ಹಣ್ಣಿನ ಗಿಡಕ್ಕೂ ಒಬ್ಬೊಬ್ಬ ವಿದ್ಯಾರ್ಥಿಗಳ ಹೆಸರು
ಇನ್ನು 30 ಮಕ್ಕಳಿರೋ ಈ ಶಾಲೆಯಲ್ಲಿ ಮಕ್ಕಳಿಗೆಂದೇ ಬೆಳೆದಿರೋ ತೋಟದ ಸುತ್ತಲೂ ಮಕ್ಕಳ ಹೆಸರಲ್ಲಿ ಒಂದೊಂದು ಹಣ್ಣಿನ ಗಿಡ ನೆಟ್ಟಿದ್ದಾರೆ. ಆ ಗಿಡಗಳನ್ನ ಮಕ್ಕಳೇ ನಿತ್ಯ ನೀರು ಹಾಕಿ ಪೋಷಣೆ ಮಾಡುತ್ತಿದ್ದಾರೆ. ಅಡಿಕೆ ತೋಟದ ನಿರ್ವಹಣೆಗೆಂದು ತೋಟದಲ್ಲಿ ಬೋರ್ ತೆಗೆಸಿದ್ದರು. 500 ಅಡಿ ಕೊರೆದರೂ ಒಂದು ಹನಿ ನೀರು ಬರಲಿಲ್ಲ. ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಶಿಕ್ಷಕರು ಏನಾದ್ರು ಆಗಲಿ ಅಂತ ಅದೇ ಮತ್ತೆ ಅದೇ ಬೋರ್ ಕೊರೆಸಿದರು. ಮಕ್ಕಳ ತೋಟಕ್ಕೆ ಅಂತ ಭೂಮಿತಾಯಿ ಕೂಡ 150 ಅಡಿಗೆ 3 ಇಂಚು ನೀರು ಕೊಟ್ಟು ಮಕ್ಕಳಿಗೆ ಗಿಫ್ಟ್ ಕೊಟ್ಟಿದ್ದಾಳೆ. ಇಲ್ಲಿನ ಶಿಕ್ಷಕರು ಎಳೆ ಮಕ್ಕಳಿಗೆ ಬೆಳೆಯೋ ಹಂತದಲ್ಲೇ ಒಳ್ಳೆ ಆಹಾರದ ಜೊತೆ ನಿತ್ಯ ಹಾರ್ಲಿಕ್ಸ್ ಕುಡಿಸಿ ಬೆಳೆಸುತ್ತಿದ್ದಾರೆ. ಮಕ್ಕಳ ಶ್ರೇಯಸ್ಸು ಅಭಿವೃದ್ಧಿಗೆ ಪಣ ತೊಟ್ಟಿರೋ ಶಿಕ್ಷಕರಿಗೆ ಶಾಲೆಯ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರು ಬೆನ್ನೆಲುಬಾಗಿ ನಿಂತಿದ್ದಾರೆ.

ಒಟ್ಟಾರೆ, ಪೋಷಕರ ಖಾಸಗಿ ಹಾಗೂ ಇಂಗ್ಲೀಷ್ ವ್ಯಾಮೋವೋ ಅಥವಾ ಸರ್ಕಾರಿ ಶಾಲೆ ಎಂಬ ಅಸಡ್ಡೆಯೋ? ಇಲ್ಲ ಸರ್ಕಾರದ ಬೇಜಾವಾಬ್ದಾರಿಯೋ ಗೊತ್ತಿಲ್ಲ. ಆದ್ರೆ, ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಬೀಗ ಬೀಳ್ತಾನೆ ಇದೆ. ನಮ್ಮ ಶಾಲೆಗೆ ಅಂತಹ ಪರಿಸ್ಥಿತಿ ಬರಬಾರದು ಅಂತ ಶಿಕ್ಷಕರು-ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರ ಈ ಕಾರ್ಯಕ್ಕೆ ಹ್ಯಾಟ್ಸಾಫ್ ಹೇಳಲೇಬೇಕು. ಇದನ್ನೂ ಓದಿ: ಚಿತ್ರದುರ್ಗದಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಮನೆ ಮೇಲೆ ಲೋಕಾಯುಕ್ತ ದಾಳಿ

Share This Article