ಶಾಂತಿಯುತವಾಗಿ ಸಂಪನ್ನಗೊಳ್ತು ಕಾಫಿನಾಡ ದತ್ತ ಜಯಂತಿ

Public TV
2 Min Read

ಚಿಕ್ಕಮಗಳೂರು: ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರಿನ ವಿವಾದಿತ ಹಾಗೂ ಧಾರ್ಮಿಕ ಕೇಂದ್ರ ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ನಡೆಯುತ್ತಿದ್ದ ದತ್ತ ಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಡಿಸೆಂಬರ್ 1ರಂದು ಮಾಲೆ ಧರಿಸಿ, 12 ದಿನಗಳಿಂದ ವೃತಾಚರಣೆಯಲ್ಲಿದ್ದ ದತ್ತ ಭಕ್ತರು ಇಂದು ಇರುಮುಡಿಯನ್ನ ದತ್ತಾತ್ರೇಯನಿಗೆ ಒಪ್ಪಿಸಿ ಪುನೀತರಾದರು.

ಮಾಗಿಯ ಭಾರೀ ಚಳಿಯಲ್ಲೂ ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಮಿಂದು ದತ್ತ ಪಾದುಕೆ ದರ್ಶನ ಮಾಡಿದ್ದಾರೆ. ಐದು ಸಾವಿರಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನಲ್ಲಿ ಕಾರ್ಯಕ್ರಮ ಯಾವುದೇ ಸಮಸ್ಯೆಯಿಲ್ಲದೆ ಮುಕ್ತಾಯ ಕಂಡಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಕಾಫಿನಾಡಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ದತ್ತಪೀಠ ಹಿಂದೂಗಳ ಪೀಠವೆಂಬ ಆಕ್ರೋಶದ ಘೋಷಣೆ ಮಾತ್ರ ಹಾಗೇ ಇದೆ.

ಚಿಕ್ಕಮಗಳೂರಿನ ದತ್ತಪೀಠವನ್ನು ದತ್ತಭಕ್ತರು ಕರ್ನಾಟಕದ ಅಯೋಧ್ಯೆ ಎಂದೇ ಕರೆಯುತ್ತಾರೆ. ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತಗಳ ಸಾಲಿನ ಮುಗಿಲೆತ್ತರದ ಬೆಟ್ಟಗುಡ್ಡಗಳ ಮಧ್ಯೆ ಸುಂದರ ವಾತಾವರಣದಲ್ಲಿರೋ ದತ್ತಪೀಠ ಉಮೇದುವಾರಿಕೆಗಾಗಿ ಮೂರ್ನಾಲ್ಕು ದಶಕಗಳ ವಿವಾದ ಹಾಗೇ ಇದೆ. ಇಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಳೆದೆರಡು ದಶಕಗಳಿಂದ ದತ್ತಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದು, ದತ್ತಪೀಠ ನಮಗೆ ಸೇರಿದ್ದು ಅಂತಿದ್ದಾರೆ. ಇಂದು ಕೂಡ ದತ್ತಭಕ್ತರು, ಇದು ಹಿಂದುಗಳ ಪೀಠ. ಸರ್ಕಾರ ದಾಖಲೆಗಳನ್ನ ಪರಿಶೀಲಿಸಿ ಪೀಠವನ್ನ ಹಿಂದೂಗಳಿಗೆ ಒಪ್ಪಿಸಿ, ತ್ರಿಕಾಲ ಪೂಜೆಗೆ ಅವಕಾಶ ನೀಡಿ ಹಿಂದೂ ಅರ್ಚಕರನ್ನ ನೇಮಕ ಮಾಡಬೇಕೆಂದು ಆಗ್ರಹಿಸಿದ್ದಾರೆ.

ದತ್ತಜಯಂತಿಯ ಅಂಗವಾಗಿ ಕಾಫಿನಾಡು ಕಳೆದ ಮೂರು ದಿನಗಳಿಂದ ಒಂದೆಡೆ ಕೇಸರಿ, ಮತ್ತೊಂದೆಡೆ ಖಾಕಿಗಳ ನಾಡಾಗಿತ್ತು. ಎಲ್ಲಿ ನೋಡಿದ್ರು ಕೇಸರಿ-ಖಾಕಿ ಬಣ್ಣವೇ ಗೋಚರವಾಗ್ತಿತ್ತು. ಎರಡು ವರ್ಷಗಳ ಹಿಂದೆ ಇದೇ ದಿನ ದತ್ತಪೀಠದಲ್ಲಿದ್ದ ಗೋರಿಗಳಿಗೆ ಹಾನಿಯಾಗಿದ್ದರಿಂದ ಈ ವರ್ಷ ಬಂದೋಬಸ್ತ್‍ನ್ನು ಮತ್ತಷ್ಟು ಹೆಚ್ಚಿಸಲಾಗಿತ್ತು. ಹಾಸನ, ಮೈಸೂರು, ಮಡಿಕೇರಿ, ಚಾಮರಾಜನಗರ, ಉಡುಪಿ, ಮಂಡ್ಯ, ಮಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಬಂದಿದ್ದ ಐದು ಸಾವಿರಕ್ಕೂ ಅಧಿಕ ಪೊಲೀಸರು ಕಾಫಿನಾಡಿನ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಪೊಲೀಸರ ಜೊತೆ ನಗರ ಹಾಗೂ ದತ್ತಪೀಠದಲ್ಲಿ 600 ಕ್ಕೂ ಅಧಿಕ ಕ್ಯಾಮೆರಾಗಳನ್ನು ಹಾಕಲಾಗಿತ್ತು.

ದತ್ತಪೀಠದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ ಸೇರಿದಂತೆ ವಿವಿಧ ಮಾಠಾಧೀಶರು ಭಾಗವಹಿಸಿ, ದತ್ತಪಾದುಕೆ ದರ್ಶನ ಮಾಡಿದರು. ದತ್ತಪೀಠ ಹಾಗೂ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪೊಲೀಸರ ಸರ್ಪಗಾವಲಿನಲ್ಲಿ ರಾಜ್ಯದ ಮೂಲೆ-ಮೂಲೆಗಳಿಂದ ಬಂದಿದ್ದ 25 ಸಾವಿರಕ್ಕೂ ಅಧಿಕ ಭಕ್ತರು ದತ್ತಗುಹೆ ಪ್ರವೇಶಿಸಿ ದತ್ತಾತ್ರೇಯ ಸ್ವಾಮಿಯ ಆಶೀರ್ವಾದ ಪಡೆದರು.

ಐದು ಸಾವಿರಕ್ಕೂ ಅಧಿಕ ಪೊಲೀಸರ ನಿರಂತರ ಶ್ರಮದಿಂದ ಕೂಲ್ ಸಿಟಿಯ ಹಾಟ್ ಕಾರ್ಯಕ್ರಮ ಮುಕ್ತಾಯಗೊಂಡಿದೆ. ಬಂದೋಬಸ್ತ್‍ಗಾಗಿ ಪೊಲೀಸರು ಮಾಲಾಧಾರಿಗಳಾಗಿ ದತ್ತಭಕ್ತರ ಮಧ್ಯೆ ಇದ್ದದ್ದು ವಿಶೇಷವಾಗಿತ್ತು. ಜೊತೆಗೆ ರಾಜ್ಯದ ಉತ್ತರ ಕರ್ನಾಟಕದಿಂದ ಪೊಲೀಸರು ಕಾಫಿನಾಡಿನ ಸೌಂದರ್ಯಕ್ಕೆ ಮಾರು ಹೋಗೊದರ ಜೊತೆ ಈ ವರ್ಷದ ಮೈ ಕೊರೆವ ಭಾರೀ ಚಳಿಯಲ್ಲಿ ಮೂರು ದಿನಗಳಿಂದ ನಡುಗಿರೋದಂತು ಸತ್ಯ.

Share This Article
Leave a Comment

Leave a Reply

Your email address will not be published. Required fields are marked *