ಚಿಕ್ಕಮಗಳೂರು | ಪೊಲೀಸರ ಕಿರುಕುಳಕ್ಕೆ ಆಟೋ ಚಾಲಕ ಆತ್ಮಹತ್ಯೆ – ಕಾನ್‌ಸ್ಟೇಬಲ್‌ ಅರೆಸ್ಟ್‌

Public TV
1 Min Read

ಚಿಕ್ಕಮಗಳೂರು: ಕಳಸ (Kalasa) ತಾಲೂಕಿನ ಬಸ್ತಿಗದ್ದೆ ಗ್ರಾಮದಲ್ಲಿ ಇತ್ತಿಚೆಗೆ ಡೆತ್‌ನೋಟ್‌ ಬರೆದಿಟ್ಟು ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುದುರೆಮುಖ (Kudremukh )ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್‌ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸಿದ್ದೇಶ್‌ ಎಂದು ಗುರುತಿಸಲಾಗಿದೆ. ಆ.13ರಂದು ಆಟೋ ಚಾಲಕ ನಾಗೇಶ್ (32) ಡೆತ್‌ನೋಟ್‌ ಬರೆದಿಟ್ಟು, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಆಟೋ ಚಾಲಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ, ಆರೋಪಿ ಸಿದ್ದೇಶ್‌ ಗೋವಾಕ್ಕೆ ತೆರಳಿದ್ದ. ಪೊಲೀಸರು ಪತ್ತೆ ಹಚ್ಚಿ ಆತನನ್ನು ಬಂಧಿಸಿದ್ದಾರೆ. ಆರೋಪಿ ಪೇದೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: Tumakuru | ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

ನಾಗೇಶ್ ಸಾವಿನ ನಂತರ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದವು. ಈ ನಡುವೆ ಚಿಕ್ಕಮಗಳೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ್ ಮೃತರ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದರೂ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಮರಣೋತ್ತರ ಪರೀಕ್ಷೆ ಮಾಡಲು ಬಿಡುವುದಿಲ್ಲ ಎಂದು ಕುಟುಂಬಸ್ಥರು ಹಠ ಹಿಡಿದು ಕುಳಿತಿದ್ದರು. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಮೃತ ನಾಗೇಶ್ ಕುಟುಂಬಸ್ಥರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ನ್ಯಾಯ ದೊರಕಿಸುವ ಭರವಸೆ ನೀಡಿದ್ದರು. ಇದನ್ನೂ ಓದಿ: Haveri | ಮಾದಕ ವಸ್ತು ಮಾರಾಟ – ನಾಲ್ವರು ಅರೆಸ್ಟ್

Share This Article