ಕಾರ್ಮಿಕರ ಜೊತೆ ಉಪವಾಸ ಕೂರುತ್ತೇನೆ: ಸರ್ಕಾರಕ್ಕೆ ವಿನಯ್ ಗುರೂಜಿ ಎಚ್ಚರಿಕೆ

Public TV
1 Min Read

ಚಿಕ್ಕಮಗಳೂರು: ನಾನು ಮಠ-ಮಾನ್ಯದ ಅಧಿಪತಿಯಲ್ಲ. ಗಾಂಧಿ ಟ್ರಸ್ಟಿನ ಅಧಿಪತಿ. ಅಧಿಪತಿಯೂ ಅಲ್ಲ ಕೆಲಸಗಾರನಷ್ಟೆ ಎಂದು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.

ಜನರಿಗೆ 30 ವರ್ಷಗಳಿಂದ ಸೇವೆ ನೀಡುತ್ತಿದ್ದ ಮಲೆನಾಡಿನ ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟಕ್ಕೀಡಾಗಿ ಸಂಸ್ಥೆಗೆ ಬೀಗ ಹಾಕಿದೆ. ಕೊಪ್ಪ ನಗರದಲ್ಲಿ ಕಳೆದ ಮೂರು ದಿನಗಳಿಂದ ಕಾರ್ಮಿಕರು ಸಂಸ್ಥೆಗೆ ಸರ್ಕಾರ ಸಹಕಾರ ನೀಡಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ವಿನಯ್ ಗುರೂಜಿ ಅವರು ಕೂಡ ಭಾಗವಹಿಸಿ ಮಾತನಾಡಿ ಸರ್ಕಾರಕ್ಕೆ ಎಚ್ಚರಿಸಿದರು.

ನನ್ನೊಬ್ಬನ ಸ್ವರವೇ ಮುಷ್ಕರವಾಗುವುದಿಲ್ಲ. ಎಲ್ಲರ ಸ್ವರವೂ ಸೇರಿದರೆ ಅದು ಪ್ರತಿಭಟನೆಯಾಗುತ್ತದೆ. ನಾನೊಬ್ಬನೇ ಮಾತನಾಡಿದರೆ ಅದು ಧ್ವನಿಯಾಗುತ್ತದೆ. ನಿಮ್ಮೆಲ್ಲರ ಧ್ವನಿ ಸೇರಿಸಿ ನಿಮ್ಮ ಪ್ರತಿನಿಧಿಯಾಗಿ ನಾನು ಮಾತನಾಡಬೇಕು ಎಂದು ಕೊಂಡಿದ್ದೇನೆ ಎಂದರು.

ನನಗೆ ತಿಳಿದಂತೆ ಈ ಸಮಸ್ಯೆ ಶೇಕಡಾ 100ರಷ್ಟು ಬಗೆ ಹರಿಯುತ್ತದೆ. ಯಾಕೆಂದರೆ, ನಾನು ಸೋಮವಾರ ಮಾತನಾಡಿದಾಗ, ಮೂರು ಪಕ್ಷದವರು ಸಂಸ್ಥೆ ಬಗ್ಗೆ ರಾಜಕೀಯ ಬೆರಸದೆ ಕೆಲಸ ಮಾಡುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ. ನನಗೆ ತಿಳಿದಂತೆ ಸಮಸ್ಯೆ ಬಗೆಹರಿಯುತ್ತದೆ. ಒಂದು ವೇಳೆ ಆಗದಿದ್ದರೆ ಕಾರ್ಮಿಕರು ಅನ್ನ-ನೀರು ಬಿಟ್ಟು ಉಪವಾಸ ಕೂರುವುದಕ್ಕಿಂತ ನಾವು ಹಾಗೂ ನಮ್ಮ ಆಶ್ರಮದವರು ಅನ್ನ-ನೀರು ಬಿಟ್ಟು ಇದೇ ಜಾಗದಲ್ಲಿ ಮುಷ್ಕರ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *