ಸಾಲು ಸಾಲು ದುರಂತದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಪೊಲೀಸರು ಅಲರ್ಟ್‌ – ಗಣೇಶ ವಿಸರ್ಜನೆಗೆ ಬಿಗಿ ಬಂದೋಬಸ್ತ್

Public TV
2 Min Read

– ಗೌರಿಬಿದನೂರು ಬೈಪಾಸ್ ಗಣೇಶ ವಿಸರ್ಜನೆ; 500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
– ಮಸೀದಿ-ಮಂದಿರ-ಚರ್ಚ್‌ಗಳ ಬಳಿ ವಿಶೇಷ ಭದ್ರತೆ

ಚಿಕ್ಕಬಳ್ಳಾಪುರ: ರಾಜ್ಯದೆಲ್ಲೆಡೆ ಗಣೇಶ ವಿಸರ್ಜನಾ ಮೆರವಣಿಗೆಗಳು (Ganesha Visarjan Procession) ಜೋರಾಗಿ ಸಾಗುತ್ತಿದ್ದರೆ, ಕೆಲ ಕಡೆಗಳಲ್ಲಿ ನಡೆದ ಅಹಿತಕರ ಘಟನೆಗಳಿಂದ ಪೊಲೀಸರು ಹೈಅಲರ್ಟ್ ಆಗಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಪಟಾಕಿ ಸ್ಫೋಟದಿಂದ ಇಬ್ಬರು ಬಾಲಕರ ಸಾವು, ಮದ್ದೂರಿನಲ್ಲಿ ಕಲ್ಲುತೂರಾಟ ಗಲಾಟೆ, ಹಾಸನದಲ್ಲಿ ಮೆರವಣಿಗೆಯ ವೇಳೆ ಆದ ಅಪಘಾತದ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆ ಪೊಲೀಸರೂ (Chikkaballapura Police) ಫುಲ್‌ ಅಲರ್ಟ್‌ ಆಗಿದ್ದಾರೆ.

ಗೌರಿಬಿದನೂರು ಬೈಪಾಸ್ ಗಣೇಶನ ವಿಶೇಷ
ಪ್ರತಿಷ್ಠಿತ ಬೈಪಾಸ್ ಗಣೇಶೋತ್ಸವ 22ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಬಾರಿ 22 ಅಡಿ ಎತ್ತರದ ಪ್ರಣವ ಮಹಾರುದ್ರ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಪೆಂಡಾಲ್‍ನಲ್ಲಿ ದೇಶದ ಪ್ರಸಿದ್ಧ ದೇವಾಲಯಗಳ ಮಾದರಿಗಳನ್ನು ಅಲಂಕರಿಸಿರುವುದು ಭಕ್ತರ ಗಮನ ಸೆಳೆದಿದೆ. ಭಾನುವಾರ ನಡೆಯಲಿರುವ ಗಂಗಾವಿಲೀನ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಹಾಸನ ದುರಂತ – ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸ್ವಯಂಪ್ರೇರಿತ ಬಂದ್

ಪೊಲೀಸರ ತಯಾರಿ ಹೇಗಿದೆ?
ಸಂಭಾವ್ಯ ಅಹಿತಕರ ಘಟನೆಗಳನ್ನ ತಪ್ಪಿಸಲು ಜಿಲ್ಲೆಯ ಎಸ್ಪಿ ಕುಶಲ್ ಚೌಕ್ಸಿ ನೇತೃತ್ವದಲ್ಲಿ ಹಲವು ಶಾಂತಿ ಸಭೆಗಳನ್ನು ನಡೆಸಲಾಗಿದೆ. ಮುನ್ನೆಚ್ಚರಿಕೆಯಾಗಿ ಗೌರಿಬಿದನೂರು ಪಟ್ಟಣದಲ್ಲಿ ಭಾರೀ ಪೊಲೀಸರ ಪಥಸಂಚಲನ ನಡೆಸಲಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಮೆರವಣಿಗೆ ಸರಿಸುಮಾರು ಸಂಜೆ 8ರ ವರೆಗೆ ಸಾಗಲಿದ್ದು, 500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗುತ್ತಿದೆ. ಮಸೀದಿ, ಮಂದಿರ, ಚರ್ಚ್ ಮುಂತಾದ ಧಾರ್ಮಿಕ ಕೇಂದ್ರಗಳ ಬಳಿ ವಿಶೇಷ ಭದ್ರತೆ ಏರ್ಪಡಿಸಲಾಗಿದೆ. ಸಿಸಿ ಟಿವಿಗಳನ್ನ ಆಳವಡಿಸಲಾಗುತ್ತಿದೆ. ಡ್ರೋನ್ ಕ್ಯಾಮೆರಾ ಬಳಸಿ ವಿಡಿಯೋ ಚಿತ್ರೀಕರಣ ಸಹ ಮಾಡಿಸಲು ತೀರ್ಮಾನ ಮಾಡಲಾಗಿದೆ. ಇದನ್ನೂ ಓದಿ: ಹಾಸನ | ವಿಮಾನ ದುರಂತದಲ್ಲಾದ್ರೆ 1 ಕೋಟಿ ಕೊಡ್ತೀರಿ, ಬಡವರ ಜೀವಕ್ಕೆ ಬೆಲೆ ಇಲ್ವಾ? – ಸಚಿವರಿಗೆ ಜನರ ತರಾಟೆ

ಪೊಲೀಸರಿಂದ ಸಾರ್ವಜನಿಕರಿಗೆ ಸಂದೇಶ
ಗಣೇಶ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನಡೆಯಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಹ ಸಹಕಾರ ನಿಡಬೇಕು ಎಂದು ಎಸ್‍ಪಿ ಕುಶಲ್ ಚೌಕ್ಸಿ ಮನವಿ ಮಾಡಿಕೊಂಡಿದ್ದಾರೆ. ಗೌರಿಬಿದನೂರಿನ ಬೈಪಾಸ್ ಗಣೇಶ ವಿಸರ್ಜನೆಗೆ ಕಟ್ಟಿನಿಟ್ಟಿನ ಭದ್ರತೆ ಒದಗಿಸಲು ಮುಂದಾಗಿರುವ ಪೊಲೀಸರು ಭಕ್ತರು ಶಾಂತಿಯುತವಾಗಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಾಸನ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಪ್ರಧಾನಿ ಮೋದಿ ಸಂತಾಪ

Share This Article