ಮಧ್ಯರಾತ್ರಿ ನೆರೆಮನೆ ಮೇಲೆ ದಾಳಿ – ಕಿಟಕಿ ಬಾಗಿಲು ಒಡೆದ ಮಹಿಳೆಯರು

Public TV
2 Min Read

– ಮಲಗಿದ್ದವರ ಮನೆಯ ಮೇಲೆ ನೆರೆ ಮನೆಯವ್ರಿಂದ ಅಟ್ಯಾಕ್

ಚಿಕ್ಕಬಳ್ಳಾಪುರ: ಮಧ್ಯರಾತ್ರಿ ದಂಪತಿ ಮನೆಯ ಮೇಲೆ ಸೈಜುಗಲ್ಲು ದೊಣ್ಣೆಗಳಿಂದ ದಾಳಿ ನಡೆಸಿರುವ ಪಕ್ಕದ ಮನೆಯವರು ಕಿಟಕಿ ಬಾಗಿಲು ಬಡಿದು ಒಡೆದು ಹಾಕಲು aಯತ್ನಿಸಿರುವ ಭಯಾನಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ.

ಬಾಗೇಪಲ್ಲಿ ಪಟ್ಟಣದ 9 ನೇ ವಾರ್ಡಿನಲ್ಲಿ ಈ ಘಟನೆ ನಡೆದಿದ್ದು, ಗಾರೆ ಮೇಸ್ತ್ರಿ ಲಕ್ಷ್ಮಿಪತಿಯವರ ಮನೆಯ ಮೇಲೆ ಪಕ್ಕದ ಮನೆಯ ಗಂಗಪ್ಪ ಹಾಗೂ ಅವರ ಕುಟುಂಬಸ್ಥರು ಅದರಲ್ಲೂ ಮಹಿಳೆಯರು ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಲಕ್ಷ್ಮಿಪತಿಗೆ ಮನೆಯ ಬಾಗಿಲು ತೆರೆಯುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮನಬಂದಂತೆ ಮನಸ್ಸೋ ಇಚ್ಛೆ ಬೈದಿದ್ದಾರೆ.

ನೆರೆಮನೆಯವರ ಕೃತ್ಯಕ್ಕೆ ಬೆದರಿದ ಲಕ್ಷ್ಮಿಪತಿ ಹಾಗೂ ಅವರ ಪತ್ನಿ ಸೇರಿದಂತೆ ಇಬ್ಬರು ಮಕ್ಕಳು ಮನೆಯಲ್ಲೇ ಚಿಲಕ ಹಾಕಿಕೊಂಡು ಒಳಗಡೆಯೇ ಇದ್ದು ಹೊರಗೆ ಬಂದಿಲ್ಲ. ಈ ವೇಳೆ ದೊಡ್ಡ ದೊಡ್ಡ ಸೈಜುಗಲ್ಲು, ಇಟ್ಟಿಗೆ ಹಾಗೂ ದೊಣ್ಣೆಗಳಿಂದ ಕಿಟಕಿ ಬಾಗಿಲು ಹೊಡೆದಿದ್ದು, ಮನೆಯ ಹೊರಭಾಗದಲ್ಲಿದ್ದ ಬೈಕ್ ಹಾಗೂ ಗೃಹೋಪಯೋಗಿ ವಸ್ತುಗಳನ್ನ ಧ್ವಂಸಗೊಳಿಸಿದ್ದಾರೆ.

ಮೊದಲಿನಿಂದಲೂ ಈ ಲಕ್ಷ್ಮಿಪತಿ ಹಾಗೂ ಗಂಗಪ್ಪ ಕುಟುಂಬಸ್ಥರ ನಡುವೆ ಭಿನ್ನಾಭಿಪ್ರಾಯಗಳಿದ್ದು, ಪರಸ್ಪರ ವೈಮನಸ್ಸಿದೆ. ಹೀಗಾಗಿ ಕೆಲ ದಿನಗಳ ಹಿಂದೆ ಲಕ್ಷ್ಮಿಪತಿಯ ಮಗಳು ಶಾಲೆಯಿಂದ ಸ್ನೇಹಿತೆ ಜೊತೆ ಬರುವಾಗ ಗಂಗಪ್ಪ ಕೆಟ್ಟ ಮಾತುಗಳಿಂದ ನಿಂದಿಸುತ್ತಿದ್ದನಂತೆ. ಇದರಿಂದ ಲಕ್ಷ್ಮಿಪತಿಯ ಪತ್ನಿ ಯಾಕೆ ನನ್ನ ಮಗಳನ್ನ ಬೈತೀಯಾ ಎಂದು ಗಂಗಪ್ಪನ ಕುಟುಂಬಸ್ಥರ ಜೊತೆ ಗಲಾಟೆ ಮಾಡಿಕೊಂಡಿದ್ದರಂತೆ.

ಈ ವಿಚಾರಕ್ಕೆ ಜಿದ್ದು ಇಟ್ಟುಕೊಂಡಿದ್ದ ಗಂಗಪ್ಪ ಹಾಗೂ ಅವರ ಕುಟುಂಬಸ್ಥರು ಮಧ್ಯರಾತ್ರಿ ಲಕ್ಷ್ಮಿಪತಿ ಮನೆಯವರ ಮೇಲೆ ಅಟ್ಯಾಕ್ ಮಾಡಿದ್ದಾರೆ. ದಾಳಿ ವೇಳೆಯೇ ಪೊಲೀಸರಿಗೆ ಕರೆ ಮಾಡಿ ತಮ್ಮನ್ನ ರಕ್ಷಣೆ ಮಾಡಿ ಎಂದು ಲಕ್ಷ್ಮಿಪತಿ ಕುಟುಂಬದವರು ಕೇಳಿಕೊಂಡಿದ್ದಾರೆ. ಸಾಕಷ್ಟು ಸಮಯದ ನಂತರ ಸ್ಥಳಕ್ಕೆ ಬಂದ ಪೊಲೀಸರು, ಗಂಗಪ್ಪ ಕುಟುಂಬಸ್ಥರಿಗೆ ಬುದ್ಧಿವಾದ ಹೇಳಿ ಹೋಗಿದ್ದಾರೆ. ಆದರೆ ಪೊಲೀಸರು ಹೋದ ಮೇಲೆ ಮತ್ತೆ ಅದೇ ರೀತಿ ದಾಳಿ ನಡೆಸಿದ್ದಾರೆ. ಹೀಗಾಗಿ ಗಂಗಪ್ಪ ಹಾಗೂ ಕುಟುಂಬಸ್ಥರ ದಾಳಿಗೆ ಬೆದರಿರುವ ಲಕ್ಷ್ಮಿಪತಿ ದಂಪತಿ ಹಾಗೂ ಮಕ್ಕಳು ಸದ್ಯ ತಮ್ಮ ಸ್ವಂತ ಮನೆಯನ್ನ ತೊರೆದು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *