ಪೊಲೀಸರ ಸೋಗಿನಲ್ಲಿ ಡಕಾಯಿತಿಗೆ ಯತ್ನಿಸಿದ 10 ಮಂದಿ ಖದೀಮರು ಅಂದರ್

Public TV
1 Min Read

ಚಿಕ್ಕಬಳ್ಳಾಪುರ: ಪೊಲೀಸರು ಹಾಗೂ ಪತ್ರಕರ್ತರ ಸೋಗಿನಲ್ಲಿ ಡಕಾಯಿತಿಗೆ ಯತ್ನಿಸಿದ 10 ಮಂದಿ ಕಳ್ಳ ಖದೀಮರು ಜೈಲು ಸೇರಿದ್ದಾರೆ.

ಬಂಧಿತರನ್ನು ಬೆಂಗಳೂರು ಮೂಲದ ಉಸ್ಮಾನ್ ಘನಿ, ತಮಿಳುನಾಡು ಮೂಲದ ಕಾರ್ತಿಕೇಯನ್, ಬೆಂಗಳೂರು ಮೂಲದ ಕಾರುಚಾಲಕ ಕಿರುಬಾಕರನ್, ರಘುನಂದನ್, ಚಿಂತಾಮಣಿ ಮೂಲದ ಸೈಯದ್ ಅಹಮದ್, ಕೋಲಾರದ ಸುನಿಲ್, ಬೆಂಗಳೂರಿನ ಸಲೀಂ, ನದೀಮ್ ಬಾಷಾ, ಕೋಲಾರದ ಕೆ ಸಿ ಕೃಷ್ಣ, ಹಾಗೂ ರಾಜೇಶ್ ಎಂದು ಗುರುತಿಸಲಾಗಿದೆ.

ಮಾರ್ಚ್ 13ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮಂಡಿಕಲ್ ಗ್ರಾಮ ಹೊರವಲಯದ ನಾಗರತ್ನಮ್ಮ-ಜಯರಾಮ್ ದಂಪತಿಯ ಮನೆಗೆ ನುಗ್ಗಿದ್ದರು. ಒಟ್ಟು 10 ಮಂದಿಯಲ್ಲಿ ಓರ್ವ ಪೊಲೀಸ್ ಸಮವಸ್ತ್ರಧಾರಿಯಾಗಿದ್ದು, ಏನಮ್ಮ ನಿಮ್ಮ ಮನೆಯಲ್ಲಿ ದುಡ್ಡು ಇದೆ ಮನೆ ಜಪ್ತಿ ಮಾಡೋಕೆ ಬಂದಿದ್ದೀವಿ ಅಂತ ಹೇಳಿ, ಮನೆಯಲ್ಲಿದ್ದ ಬೀರುಗಳನ್ನು ಕಬ್ಬಿಣದ ರಾಡ್ ಗಳಿಂದ ಒಡೆದು ಹಾಕಿದ್ದರು. ಹಣ ಸಿಗದೇ ಇದ್ದಾಗ ಅವರ ಬಳಿ ಇದ್ದ ಎರಡು ಮೊಬೈಲ್ ಗಳನ್ನು ಕಸಿದುಕೊಂಡು ಮೂರು ಕಾರುಗಳಲ್ಲಿ ಪರಾರಿಯಾಗಿದ್ದರು.

ಪರಾರಿಯಾಗುವ ಸಂದರ್ಭದಲ್ಲಿ ಮಂಡಿಕಲ್ ನಂತರ ಶೆಟ್ಟಿಗೆರೆ ಗ್ರಾಮದಲ್ಲಿ ಅನುಮಾನಗೊಂಡ ಗ್ರಾಮಸ್ಥರು ಕಾರುಗಳನ್ನು ಅಡ್ಡಗಟ್ಟಿದ್ದರು. ಈ ವೇಳೆ ಒಂದು ಕಾರಿನಲ್ಲಿದ್ದವರು ಪರಾರಿಯಾಗಿದ್ದು ಎರಡು ಕಾರುಗಳ ಸಮೇತ ಅದರಲ್ಲಿದ್ದವರಿಗೆ ಗ್ರಾಮಸ್ಥರು ದಿಗ್ಬಂಧನ ವಿಧಿಸಿದ್ದರು. ನಂತರ ಅವರನ್ನು ವಶಕ್ಕೆ ಪಡೆದ ಗುಡಿಬಂಡೆ ಸಿಪಿಐ ಸುನಿಲ್ ವಿಚಾರಣೆ ನಡೆಸಿದಾಗ ಆಸಲಿಯತ್ತು ಬೆಳಕಿಗೆ ಬಂದಿದೆ.

ಅಂದಹಾಗೆ ಆಸಲಿಗೆ ಬಂಧಿತರು ಡಕಾಯಿತಿ ಮಾಡುವ ಉದ್ದೇಶದಿಂದಲೇ ಪ್ಲಾನ್ ಮಾಡಿ ಮೂರು ಕಾರುಗಳ ಮುಖಾಂತರ ಬಂದಿದ್ದು, ಯಾರೋ ಜಯರಾಮ್ ಮನೆಯಲ್ಲಿ ಬಹಳ ಹಣ ಇರುತ್ತೆ ಎಂದು ಮಾಹಿತಿ ನೀಡಿದ್ದರಂತೆ. ಹೀಗಾಗಿ ಪ್ಲಾನ್ ಮಾಡಿ ಈ ಕೃತ್ಯ ಎಸಗಿದ್ದಾರೆ. ಸದ್ಯ ಕೃತ್ಯಕ್ಕೆ ಬಳಸಿದ ಮೂರು ಕಾರು ಹಾಗೂ ಕಬ್ಬಿಣದ ರಾಡ್‍ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು 10 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *