ಆಶಾಜ್ಯೋತಿ ಕರುಣಾಮಯಿ ಗೋಡೆ ಆರಂಭಿಸಿದ ಪಬ್ಲಿಕ್ ಹೀರೋ!

Public TV
3 Min Read

ಚಿಕ್ಕಬಳ್ಳಾಪುರ: ಕೊಳ್ಳುಬಾಕ ಸಂಸ್ಕೃತಿಯಲ್ಲಿ ನಾವೆಲ್ಲ ಕಳೆದು ಹೋಗಿದ್ದೇವೆ. ಅಧಿಕ ಬೆಲೆ ತೆತ್ತು ತಂದ ವಸ್ತುಗಳು ಉಪಯೋಗಕ್ಕೆ ಸೂಕ್ತವಾದರೂ ಕೆಲ ದಿನಗಳಲ್ಲೇ ನಮಗೆ ಬೇಡವಾದ ವಸ್ತುಗಳಾಗಿ ಭಾರವಾಗಿ ಬಿಡುತ್ತವೆ. ಹೀಗೆ ನಮ್ಮ ಬಳಿ ಇರುವ ಅನೇಕ ವಸ್ತುಗಳು ಉಪಯೋಗಕ್ಕೆ ಬಳಕೆಗೆ ಯೋಗ್ಯವಾದರೂ ನಮ್ಮಲ್ಲೇ ನಿರುಪಯುಕ್ತವಾಗಿ ನಿಂತು ಬಿಟ್ಟಿರುತ್ತವೆ. ಅದೆಷ್ಟೋ ವಸ್ತುಗಳು ಹಲವರ ಬಳಿ ನಿರುಪಯುಕ್ತವಾಗಿ ಇದ್ದಲ್ಲೇ ಇದ್ದು ಕೊನೆಗೆ ವ್ಯರ್ಥವಾಗಿ ಬಿಡುತ್ತವೆ. ಹೀಗಾಗಿ ಇಂತಹ ವಸ್ತುಗಳನ್ನ ಏನು ಮಾಡಬೇಕು ಎಂಬ ಪ್ರಶ್ನೆ ಎದುರಾಗಿರುವ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಖ್ಯಾತಿಯ ನಗರದ ಮಾನಸ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಮಧುಕರ್ ಹೊಸೂರು ಅವರು ಜಿಲ್ಲಾಸ್ಪತ್ರೆಯ ಬಳಿ ವಾಲ್ ಆಫ್ ಕೈಂಡ್ ನೆಸ್ ಎಂಬ ಆಶಾಜ್ಯೋತಿ ಕಾರ್ಯವನ್ನು ಆರಂಭಿಸಿದ್ದಾರೆ.

ಏನಿದು ವಾಲ್ ಆಫ್ ಕೈಂಡ್‍ನೆಸ್?
ಉಪಯೋಗಕ್ಕೆ ಬರುವ ಆದರೆ ಬಳಸದೆ ನಿರುಪಯುಕ್ತವಾಗುತ್ತಿರುವ ವಸ್ತುಗಳು ಮತ್ಯಾರಿಗೋ ಬೇಕಾಗುವ ಅಗತ್ಯ ಎನಿಸುವುಗಳನ್ನು ಕರುಣೆಯ ಗೋಡೆಯ ಗೂಡಿನೊಳಗೆ ಇಟ್ಟರೆ ಸಾಕು. ಅದು ಬೇಕಾದವರ ಪಾಲಿಗೆ ಬಡವರ ಪಾಲಿಗೆ ಸಹಾಯವಾಗುತ್ತವೆ. ಅಲ್ಲಿ ನಿಮಗೆ ಬೇಡವಾದದ್ದನ್ನು ಇಟ್ಟು, ನಿಮಗೆ ಬೇಕಾದ ಅಗತ್ಯ ವಸ್ತುಗಳಿದ್ದರೇ ಅವುಗಳನ್ನ ಸಹ ನೀವು ಅಲ್ಲಿಂದ ಪಡೆದುಕೊಳ್ಳಬಹುದಾಗಿದೆ. ಇದು ವಾಲ್ ಆಫ್ ಕೈಂಡ್ ನೆಸ್ ನ ಕಾರ್ಯವಾಗಿದೆ.

ನಗರದ ಜಿಲ್ಲಾಸ್ಪತ್ರೆ ಬಳಿ ಈ ರೀತಿಯ ವಾಲ್ ಆಫ್ ಕೈಂಡ್ ನೆಸ್ ಎಂಬ ಆಶಾ ಜ್ಯೋತಿಯ ವುಡ್‍ನಲ್ಲಿ ಮಾಡಲಾಗಿರುವ ಕರುಣಾಮಯಿ ಗೋಡೆ ತಲೆ ಎತ್ತಿ ನಿಂತಿದೆ. ರಾಮು ವುಡ್ ವರ್ಕರ್ ನವರು ಈ ಉದಾರ ಕಾರ್ಯಕ್ಕೆ ಫ್ಲೈವುಡ್ ಶೀಟ್‍ನಲ್ಲಿ ಮಾಡಲಾಗಿರುವ ಬಾಕ್ಸ್ ಗಳುಳ್ಳ ಶೆಲ್ಫ್ ಕೊಡುಗೆಯಾಗಿ ನೀಡಿದ್ದಾರೆ.

ಉಳ್ಳವರು ಇಲ್ಲದವರಿಗೆ ಕೈಲಾದ ನೆರವು ನೀಡುವ ಪರಿಕಲ್ಪನೆಯಾಗಿದೆ. ಆದರೆ ಇಲ್ಲಿ ಹರಿದ ಬಟ್ಟೆ, ಬಳಸಲಾಗದ ಮುರುಕು ಸಾಮಾಗ್ರಿಗಳನ್ನು ನೀಡಬೇಡಿ. ಏಕೆಂದರೆ, ‘ತೆಗೆದುಕೊಳ್ಳುವವರಿಗೂ ಒಂದು ಆತ್ಮಗೌರವ, ಆತ್ಮಾಭಿಮಾನ ಇರುತ್ತದೆ. ಇಲ್ಲಿ ಯಾರೂ ಯಾರಿಗೂ ಭಿಕ್ಷೆ ನೀಡುತ್ತಿಲ್ಲ. ಹಾಗಾಗಿ ಬಳಸಲು ಯೋಗ್ಯವಾದ ವಸ್ತುಗಳನ್ನು ಮಾತ್ರ ಇಲ್ಲಿಡಿ’ ಎನ್ನುವುದು ಡಾ.ಮಧುಕರ್ ಅವರು ಮನವಿ ಮಾಡಿಕೊಂಡಿದ್ದಾರೆ.

ಬಡವರಿಗೆ ಸಹಾಯ ಮಾಡಬೇಕು ಎಂಬ ಹಂಬಲ ವೈದ್ಯ ವೃತ್ತಿಯ ಜೊತೆ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಮಧುಕರ್ ಅವರು, ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಬಳಿ ಪ್ರತಿದಿನ ಮಧ್ಯಾಹ್ನ ಬಡ ರೋಗಿಗಳಿಗೆ ಉಚಿತ ಊಟ ನೀಡುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಆಗಿದ್ದರು. ಅಲ್ಲದೆ ನಗರದ ಹೊರವಲಯದ ಬೋದಗಾನಹಳ್ಳಿ ಬಳಿ ವೃದ್ಧಾಶ್ರಮ ನಡೆಸುತ್ತಾ ಹಲವು ಮಂದಿ ವಯೋವೃದ್ಧರಿಗೆ ಆಸರೆಯಾಗಿದ್ದಾರೆ. ಇವರ ಸಮಾಜಸೇವೆಯ ಮುಂದುವರಿದ ಭಾಗವಾಗಿ ವಾಲ್ ಆಫ್ ಕೈಂಡ್‍ನೆಸ್ ಗೋಡೆ ಆರಂಭವಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಮುಂದೆ ಡಾಕ್ಟರ್ ದಂಪತಿಯಿಂದ ರೋಗಿಗಳಿಗೆ ಫ್ರೀ ಊಟ

ನೀವು ಕೂಡ ನಿಮ್ಮಲ್ಲಿ ಹೆಚ್ಚಿಗೆ ಇರುವ ಅಥವಾ ನಿಮಗೆ ಅಗತ್ಯವಿರದ ವಸ್ತುಗಳಿದ್ದಲ್ಲಿ ಅಂದರೆ ಬಟ್ಟೆ, ಚಪ್ಪಲಿ, ಬೆಡ್‍ಶೀಟ್, ಬುಕ್ಸ್, ಶೂ, ಸ್ಕೂಲ್ ಬ್ಯಾಗ್ಸ್, ಲಂಚ್ ಬ್ಯಾಗ್ಸ್, ಯೂನಿಫಾರ್ಮ್, ಪೆನ್, ಪೆನ್ಸಿಲ್, ಛತ್ರಿ ಹೀಗೆ ಯಾವುದೇ ಆಗಿದ್ದರೂ ಅದು ಮತ್ತೊಬ್ಬರಿಗೆ ಅವಶ್ಯಕವಾಗಿರುತ್ತೆ. ಪುಸ್ತಕದಲ್ಲಿ ಇನ್ನು ಬರೆಯಲು ಪುಟಗಳಿದ್ದಾಗಲೇ ಮೂಲೆ ಸೇರಿರುತ್ತೆ. ಚಪ್ಪಲಿ, ಶೂಗಳು ಅಗತ್ಯಕ್ಕಿಂತ ಒಂದೆರಡು ಜೋಡಿ ಹೆಚ್ಚಿಗಿಯೇ ಇರುತ್ತವೆ. ಇಂತಹ ಅಗತ್ಯವಿರದ ವಸ್ತುಗಳು 4 ಜನರಿಗೆ ಸಹಾಯವಾಗುತ್ತದೆ. ತಮಗೆ ಅಗತ್ಯವಿಲ್ಲದ ವಸ್ತುಗಳನ್ನು ಇಲ್ಲಿ ತಂದಿಟ್ಟರೆ, ಆ ವಸ್ತುಗಳ ಅವಶ್ಯಕತೆ ಇರುವವರು ಅವುಗಳನ್ನು ಬಳಸಬಹುದು. ಯಾರೂ ಹಿಂಜರಿಯಬೇಕಿಲ್ಲ. ಯಾರಾದ್ರೂ ಏನಾದ್ರೂ ಅಂದುಕೊಳ್ಳಬಹುದು ಎಂಬ ಅಸಹ್ಯಪಟ್ಟುಕೊಳ್ಳುವ ಮನಸ್ಥಿತಿಯೂ ಬೇಡ. ಏಕೆಂದರೆ ಇದು ಕರುಣೆಯ ಗೋಡೆ. ಕರುಣೆ ಇದ್ದಲ್ಲಿ ಯಾವ ಅವಮಾನ, ಹಿಂಜರಿಕೆಗಳೂ ಅಡ್ಡಬರುವುದಿಲ್ಲ. ಕೆಲ ದಿನಗಳ ಹಿಂದಷ್ಟೇ ಆರಂಭಗೊಂಡ ಕರುಣೆಯ ಗೋಡೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *