ಸಮ್ಮಿಶ್ರ ಸರ್ಕಾರಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಸಂಕಟ-ಕಂಟಕ!

Public TV
2 Min Read

ಚಿಕ್ಕಬಳ್ಳಾಪುರ: ಸಂಪುಟ ವಿಸ್ತರಣೆ ಮಾಡಿ ಸಮ್ಮಿಶ್ರ ಸರ್ಕಾರ ಮುಂದುವರಿಸೋಕೆ ಸ್ವತಃ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಯತ್ನಿಸುತ್ತಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರ ನಡುವೆ ಮಂತ್ರಿಗಿರಿಗಾಗಿ ನಾನಾ-ನೀನಾ ಅನ್ನೋ ಫೈಟ್ ಶುರುವಾಗಿದೆ. ಒಂದೇ ಜಿಲ್ಲೆಯ ಒಂದೇ ಜಾತಿಯ ಇಬ್ಬರು ಶಾಸಕರು ಮಂತ್ರಿ ಪದವಿಯ ಪಟ್ಟು ಹಿಡಿದಿದ್ದು, ಸ್ವತಃ ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸಂಕಟದ ಜೊತೆಗೆ ಕಂಟಕನೂ ತಂದೊಡ್ಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

5 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದರೆ, ಒಬ್ಬರು ಜೆಡಿಎಸ್ ಶಾಸಕರಿದ್ದಾರೆ. ಐವರು ಶಾಸಕರು ಒಕ್ಕಲಿಗ-ರೆಡ್ಡಿ ಸಮಯದಾಯದವರೇ ಎಂಬುದು ವಿಶೇಷ. ಹೀಗಾಗಿ ಈಗಾಗಲೇ ಒಕ್ಕಲಿಗ ಕೋಟಾದಡಿ ಸಮ್ಮಿಶ್ರ ಸರ್ಕಾರದ ಸಂಪುಟ ರಚನೆಯಾದಾಗ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಅವರಿಗೆ ಕೃಷಿ ಮಂತ್ರಿ ಪದವಿ ಸಿಕ್ಕಿದೆ. ತಮ್ಮದೇ ಕಾಂಗ್ರೆಸ್ ಪಕ್ಷದ ಶಾಸಕರಾದರೂ ರಾಜಕೀಯ ವಿರೋಧಿಗೆ ಸಚಿವ ಸ್ಥಾನ ಸಿಕ್ಕಿದ್ದು ಅರಗಿಸಿಕೊಳ್ಳದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಸಮ್ಮಿಶ್ರ ಸರ್ಕಾರದ ವಿರುದ್ಧವೇ ಸೆಟೆದು ನಿಂತರು. ಅಂದಿನಿಂದ ಇದುವರಗೂ ಸಚಿವ ಸ್ಥಾನಕ್ಕಾಗಿ ಸರ್ಕಸ್ ಮಾಡುತ್ತಲೇ ಇದ್ದಾರೆ.

ಇತ್ತ ಲೋಕ ಚುನಾವಣೆಯ ಸೋಲಿನಿಂದ ನಿರಾಶೆಗೊಂಡಿರುವ ಮೈತ್ರಿ ನಾಯಕರು ಆಪರೇಷನ್ ಕಮಲ ತಪ್ಪಿಸಿ ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳೋಕೆ ಮುಂದಾಗಿದ್ದಾರೆ. ಅತೃಪ್ತರಲ್ಲಿ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರಿಗೂ ಸಚಿವ ಸ್ಥಾನ ನೀಡಲಿದ್ದಾರೆ ಎನ್ನಲಾಗಿದೆ. ಇದು ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ ಮುನಿಯಪ್ಪ ನವರನ್ನು ಕೆರಳುವಂತೆ ಮಾಡಿದೆ.

ಎರಡು ಬಾರಿ ಶಾಸಕರಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ನಡೆಸಿ ಸಮ್ಮಿಶ್ರ ಸರ್ಕಾರಕ್ಕೆ ಬ್ಲಾಕ್ ಮೇಲ್ ಮಾಡೋವರಿಗೆ ಸಚಿವ ಸ್ಥಾನ ಕೊಡೋದಾದ್ರೆ, 6 ಬಾರಿ ಶಾಸಕರು ಈ ಹಿಂದೆ ಸಚಿವರೂ ಅಗಿದ್ದ ತಮಗೆ ಯಾಕೆ ಸಚಿವ ಸ್ಥಾನ ಕೊಡಬಾರದು. ಹಿರಿತನದ ಆಧಾರದ ಮೇಲೆ ತಮಗೆ ಸಚಿವ ಸ್ಥಾನ ಕೊಡಿ ಅಂತಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್ ಸೇರಿದಂತೆ ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿರುವ ಮುನಿಯಪ್ಪ ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದಲೂ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಸುಧಾಕರ್ ನಡೆ ಸರ್ಕಾರಕ್ಕೆ ತಲೆನೋವಾಗಿದೆ. ಈಗ ಶಿಡ್ಲಘಟ್ಟ ಶಾಸಕ ಸಹ ಸುಧಾಕರ್ ಗೆ ಮಂತ್ರಿ ಪದವಿ ಕೊಡೋದಾದ್ರೆ ತಮಗೆ ಮಂತ್ರಿಗಿರಿ ಕೊಡಿ ಅಂತಿರೋದು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಸಂಕಟ ತಂದಿದೆ. ಯಾರಿಗೆ ಸಚಿವ ಸ್ಥಾನ ಕೊಟ್ಟರೂ ಮತ್ತೊಬ್ಬರು ರೆಬೆಲ್ ಆಗುತ್ತಾರೆ. ಒಂದೇ ಜಿಲ್ಲೆಯ ಒಂದೇ ಸಮುದಾಯದ ಮೂವರಿಗೆ ಸಚಿವ ಸ್ಥಾನ ಕೊಡೋದು ಕಷ್ಟ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಈ ಎಲ್ಲಾ ಕಾರಣಗಳಿಂದ ಚಿಕ್ಕಬಳ್ಳಾಪುರ ಜಿಲ್ಲೆಯೇ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗಲಿದೆಯಾ ಅನ್ನೋ ಪ್ರಶ್ನೆ ಕಾಡುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *