ಫಲಿತಾಂಶ ನಂತರವೂ ಮೈತ್ರಿ ಸರ್ಕಾರ ಮುಂದುವರಿಯುತ್ತೆ: ಶಿವಶಂಕರರೆಡ್ಡಿ

Public TV
1 Min Read

– ಸಂಪೂರ್ಣವಾಗಿ ಎಕ್ಸಿಟ್ ಪೋಲ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಏನೇ ವ್ಯತ್ಯಾಸವಾದರೂ ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತದೆ ಹಾಗೂ ಮುಂದುವರಿಯುತ್ತದೆ ಎಂದು ಕೃಷಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಹೇಳಿದ್ದಾರೆ.

ನಗರದ ಜಿಲ್ಲಾಡಳಿತ ಭವನದ ಬಳಿ ಮಾತನಾಡಿದ ಸಚಿವರು, 2004 ಹಾಗೂ 2008ರಲ್ಲಿಯೂ ಎಕ್ಸಿಟ್ ಪೋಲ್‍ಗಳ ಭವಿಷ್ಯ ಸುಳ್ಳಾಗಿವೆ. ಹೀಗಾಗಿ ಎಕ್ಸಿಟ್ ಪೋಲ್‍ಗಳ ಫಲಿತಾಂಶವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‍ಗೆ 12ರಿಂದ 14 ಹಾಗೂ ಜೆಡಿಎಸ್‍ಗೆ 3 ರಿಂದ 4 ಸ್ಥಾನಗಳು ಸಿಗಲಿವೆ. ಆದರೆ ಎಕ್ಸಿಟ್ ಪೋಲ್‍ಗಳ ಪ್ರಕಾರ ಬಿಜೆಪಿಗೆ 20 ಸ್ಥಾನ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜಾತಿ ಪ್ರಾಬಲ್ಯದ ಒಕ್ಕಲಿಗ ಮತಗಳು ಬಿಜೆಪಿ ಅಭ್ಯರ್ಥಿ ಪಾಲಾಗಿದ್ದರೂ ಉಳಿದ ಎಲ್ಲಾ ಸಮುದಾಯಗಳು ಕಾಂಗ್ರೆಸ್ ಅಭ್ಯರ್ಥಿ ಕೈ ಹಿಡಿದಿವೆ. ಹೀಗಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಫೋಟೋ ಫಿನಿಷ್ ಫಲಿತಾಂಶ ಹೊರಹೊಮ್ಮಲಿದ್ದು, 10ರಿಂದ 20 ಸಾವಿರ ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್-ಜೆಡಿಎಸ್‍ನ ಕೆಲ ಶಾಸಕರಲ್ಲಿ ಈಗಲೂ ಭಿನ್ನಾಭಿಪ್ರಾಯ ಇರುವುದು ನಿಜ. ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ. ಮೈತ್ರಿ ಸರ್ಕಾರವು 5 ವರ್ಷ ಪೂರೈಸಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ ಎಂದು ತಿಳಿಸಿದರು.

ತಮ್ಮ ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ನಡೆದಿಲ್ಲ, ನಮ್ಮ ಮಾತಿಗೆ ಬೆಲೆ ಇಲ್ಲ ಎಂದು ಕೆಲ ಶಾಸಕರು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಅವರು ಪ್ರತಿಯೊಬ್ಬ ಶಾಸಕರ ಜೊತೆಗೆ ಚರ್ಚೆ ಮಾಡಿ, ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಇದೆಲ್ಲದರ ನಡುವೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರು ಮೈತ್ರಿ ಸರ್ಕಾರ ವಿಭಜನೆ ಮಾಡುವುದೇ ಲೇಸು ಎಂಬ ಹೇಳಿಕೆ ನೀಡಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *