ಡಿಜಿಟಿಲ್ ಪೇಮೆಂಟ್ ಮೂಲಕ ಮಟ್ಕಾ ದಂಧೆ – ಇಬ್ಬರು ಮಹಿಳೆಯರ ಬಂಧನ

Public TV
2 Min Read

ಚಿಕ್ಕಬಳ್ಳಾಪುರ: ಕಲಿಯುಗ ಡಿಜಿಟಿಲ್ ಯುಗವಾಗಬೇಕು, ಎಲ್ಲ ವ್ಯವಹಾರಗಳು ಅನ್‍ಲೈನ್ ಮುಖಾಂತರವೇ ನಡೆದು ಹಳ್ಳಿಯಿಂದ ದಿಲ್ಲಿಯವರೆಗೂ ಎಲ್ಲವೂ ಅನ್‍ಲೈನ್ ಮೂಲಕವೇ ವ್ಯವಹಾರ ವಹಿವಾಟು ನಡೆಯಲಿ ಅಂತ ಪ್ರಧಾನಿ ಮೋದಿ ಆಶಯಕ್ಕೆ ತಕ್ಕಂತೆ ಇತ್ತೀಚೆಗೆ ಅನ್‍ಲೈನ್ ಮೂಲಕ ಡಿಜಿಟಲ್ ಪೇಮೆಂಟ್‍ಗೆ ಪ್ರೋತ್ಸಾಹ ನೀಡಿದರು. ಆದರೆ ಅದನ್ನೇ ಬಂಡವಾಳ ಮಾಡಿಕೊಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಕಿಲಾಡಿ ಮಹಿಳೆಯರು ಅನ್‍ಲೈನ್ ಮೂಲಕವೇ ಮಟ್ಕಾ ದಂಧೆ ನಡೆಸುವ ಮೂಲಕ ಲಕ್ಷ ಲಕ್ಷ ವ್ಯವಹಾರ ನಡೆಸುತ್ತಿದ್ದರು.

ಇಂತಹ ಕಿಲಾಡಿ ಮಹಿಳೆಯರನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿಶಂಕರ್ ಹಾಗೂ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಗ್ರಾಮದಲ್ಲಿ ದಿನಸಿ ಅಂಗಡಿ ಮತ್ತು ಹೋಟೆಲ್ ನಡೆಸುತ್ತಿದ್ದ ಲಕ್ಷ್ಮಿ ಹಾಗೂ ಅಂಜಿನಮ್ಮ ಇಬ್ಬರು ದಿನಸಿ ಅಂಗಡಿ ಜೊತೆ ಹೋಟೆಲ್ ಇಟ್ಟುಕೊಂಡಿದ್ದು, ಮಟ್ಕಾ ದಂಧೆ ನಡೆಸುತ್ತಿದ್ದರು.

1 ರೂಪಾಯಿಗೆ 70 ರೂಪಾಯಿ ಕೊಡುವ ಈ ಮಟ್ಕಾ ಜೂಜಾಟದ ವ್ಯವಹಾರವನ್ನು ಮೊಬೈಲ್ ಫೋನ್ ಕಾಲ್ ಮೂಲಕ ನಂಬರ್ ತಿಳಿಸುವುದು ಹಾಗೂ ಹಣವನ್ನು ಗೂಗಲ್ ಪೇ ಮತ್ತು ಫೋನ್ ಪೇ ಮುಖಾಂತರ ರವಾನೆ ಮಾಡುವ ಮೂಲಕ ಪ್ರತಿದಿನ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದರು. ದಿನಸಿ ಅಂಗಡಿಯಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ ಸಹ ಇಟ್ಟುಕೊಂಡಿದ್ದು, ಅದರ ಮೂಲಕ ಜೂಜಾಟದ ಹಣ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಸದ್ಯ ಲಕ್ಷ್ಮಿ ಹಾಗೂ ಅಂಜಿನಮ್ಮಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಜಿನಮ್ಮ ಹಾಗೂ ಲಕ್ಷ್ಮಿ ಬಳಿ 21 ಸಾವಿರದ ಸ್ಮಾರ್ಟ್ ಫೋನ್ ಹಾಗೂ 2 ಬಾಲ್ ಪಾಯಿಂಟ್ ಪೆನ್ ಸೇರಿದಂತೆ ಬಿಮ್ ಯುಪಿಐನ ಬಾರ್ ಕೋಡ್ ಸ್ಕ್ಯಾನರ್ ಅನ್ನು ವಶಕ್ಕೆ ಪಡೆದಿದ್ದಾರೆ.

ಮೂವರು ಪೊಲೀಸರ ಅಮಾನತು
ಮಿಟ್ಟೇಮರಿ ಗ್ರಾಮದ ಹೊರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಈ ಮಟ್ಕಾ ದಂಧೆಯನ್ನ ಮಹಿಳೆಯರು ನಡೆಸುತ್ತಿದ್ದರೂ, ದಂಧೆಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದ ಕಾರಣ ಹೊರ ಠಾಣೆ ಪೊಲೀಸ್ ಪೇದೆಗಳಾದ ಶ್ರೀನಿವಾಸ್, ಶಶಿಕುಮಾರ್ ಹಾಗೂ ದೇವರಾಜ್ ನನ್ನ ಅಮಾನತು ಮಾಡಿ ಚಿಕ್ಕಬಳ್ಳಾಪುರ ಎಸ್‍ಪಿ ಅಭಿನವ್ ಆದೇಶಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *