ಮಧುಮೇಹಿಗಳಿಗೆ ರಾಮಬಾಣವಾಗಿರುವ ಜಂಬುನೇರಳೆ ಹಣ್ಣಿಗೆ ಭಾರೀ ಡಿಮ್ಯಾಂಡ್!

Public TV
1 Min Read

-ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನ ಕಾರುಬಾರು!

ಚಿಕ್ಕಬಳ್ಳಾಪುರ: ಇಲ್ಲಿಯ ಗಲ್ಲಿ ಗಲ್ಲಿಗಳಲ್ಲಿ ನೇರಳೆ ಹಣ್ಣಿನದ್ದೆ ಕಮಾಲ್. ಮಧುಮೇಹಿಗಳಿಗೆ ರಾಮಬಾಣವಾಗಿರುವ ಜಂಬುನೇರಳೆ ಹಣ್ಣಿಗೆ ಭಾರೀ ಡಿಮ್ಯಾಂಡ್ ಇದೆ. ಇದರಿಂದ ಬೆಳೆದ ರೈತರಿಗೂ ಲಾಭ ಸೇವಿಸಿದ ಗ್ರಾಹಕರಿಗೂ ಭಾರೀ ಲಾಭವಾಗಿದೆ.

ನೇರಳೆ ಹಣ್ಣಿನಲ್ಲಿ ವಿವಿಧ ಔಷಧೀಯ ಗುಣಗಳಿವೆ. ಕೆಲವು ಕಾಯಿಲೆಗಳಿಗೆ ನೇರಳೆ ಹಣ್ಣು ರಾಮಬಾಣ ಅನ್ನೋ ಪ್ರಚಾರ ಆಗಿದ್ದೇ ತಡ, ಮಾರುಕಟ್ಟೆಯಲ್ಲಿ ಮುಗಿಬಿದ್ದು ನೇರಳೆ ಹಣ್ಣುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಇದರಿಂದ ನೇರಳೆ ಬೆಳೆದ ರೈತರಿಗೆ ಜಣ ಜಣ ಕಾಂಚಣವಾದರೆ, ಗ್ರಾಹಕರು ಔಷಧಿಯುಕ್ತ ಹಣ್ಣು ತಿಂದ ಖುಷಿಪಡುತ್ತಿದ್ದಾರೆ.

ಕಾಡು ಮೇಡು ಬೆಟ್ಟಗುಡ್ಡ, ರೈತರ ಬದುಗಳಲ್ಲಿ ಕಾಣಸಿಗುತ್ತಿದ್ದ ನೇರಳೆ ಹಣ್ಣನ್ನು ಕಂಡರೆ ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ಆದರೆ ನೇರಳೆ ಹಣ್ಣಿನಲ್ಲಿ ಅಪರೂಪದ ಕಾಯಿಲೆಗಳನ್ನು ವಾಸಿಮಾಡಬಲ್ಲ, ಔಷಧೀಯ ಗುಣಗಳಿವೆ ಅನ್ನೋದು ಗೊತ್ತಾಗುತ್ತಿದ್ದಂತೆ, ನೇರಳೆ ಹಣ್ಣಿಗೆ ಬಾರೀ ಭಾರೀ ಡಿಮ್ಯಾಂಡ್ ಬಂದಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಮಾತ್ರ ಲಭ್ಯವಿರುವ ನೇರಳೆ ಹಣ್ಣಿಗೆ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಬಂದ ಕಾರಣ ಚಿಕ್ಕಬಳ್ಳಾಪುರದ ಗಲ್ಲಿ ಗಲ್ಲಿಗಳಲ್ಲಿ ಸಣ್ಣ ಹಣ್ಣಿನ ಅಂಗಡಿಯಿಂದ ದೊಡ್ಡ ದೊಡ್ಡ ಹಣ್ಣಿನ ಅಂಗಡಿಗಳಲ್ಲೂ ನೇರಳೆ ಹಣ್ಣಿನದ್ದೇ ಕಾರುಬಾರು. ಕೆ.ಜಿ ನೇರಳೆ ಹಣ್ಣಿಗೆ ಇನ್ನೂರು ರೂಪಾಯಿಂದ ಮುನ್ನೂರು ರೂಪಾಯಿ ಕೊಟ್ಟು ಸಾರ್ವಜನಿಕರು ಖರೀದಿ ಮಾಡುತ್ತಿದ್ದಾರೆ.

ನೇರಳೆ ಮರದ ಎಲೆ, ಕಾಯಿ, ತೊಗಟೆ, ಹಣ್ಣು, ಬೀಜ ಎಲ್ಲವೂ ಔಷಧೀಯ ಗುಣಗಳನ್ನು ಒಳಗೊಂಡಿದೆ. ಇದರಿಂದ ನೇರಳೆ ಮರಗಳನ್ನು ಬೆಳೆದ ರೈತರಿಗೆ ಪುಲ್ ಡಿಮ್ಯಾಂಡೋ ಡಿಮ್ಯಾಂಡ್. ಮೇ ಜೂನ್ ತಿಂಗಳಲ್ಲಿ ಹಣ್ಣಿಗೆ ಬಾರೀ ಬೇಡಿಕೆ ಬಂದು ಹಣ್ಣುಗಳ ವರ್ತಕರು ರೈತರ ತೋಟಗಳಿಗೆ ಬಂದು ಖರೀದಿಸುತ್ತಿದ್ದಾರೆ. ಇನ್ನು ಹೂ ಮೊಗ್ಗು ಇರುವಾಗಲೇ ನೇರಳೆ ಮರಗಳ ಗುತ್ತಿಗೆ ಪಡೆಯುತ್ತಾರೆ. ನೇರಳೆ ಮರಕ್ಕೆ ಬಂಗಾರದ ಬೆಲೆ ಬಂದ ಕಾರಣ, ಕಾಡು ಮೇಡುಗಳಲ್ಲಿ ಇರುತ್ತಿದ್ದ ನೇರಳೆ ಮರಗಳು ರೈತರ ಜಮೀನುಗಳಲ್ಲಿ ತೋಟಗಳಾಗಿ ಮಾರ್ಪಡುತ್ತಿವೆ. ಇನ್ನು ಚಿಕ್ಕಬಳ್ಳಾಪುರ ತೋಟಗಾರಿಕಾ ಇಲಾಖೆ, ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ, ಸಸಿಯಿಂದ ನಾಟಿ ಮಾಡೋವರೆಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *