ಮಾಜಿ  ಸ್ಪೀಕರ್​ಗೆ  ಮಾನ ಮರ್ಯಾದೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ: ಸುಧಾಕರ್

Public TV
2 Min Read

ಚಿಕ್ಕಬಳ್ಳಾಪುರ: ನಿಮಗೆ ಮಾನ ಮರ್ಯಾದೆ ಇದ್ದರೆ ಮೊದಲು ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ, ನಿಮ್ಮನ್ನು ಕಾಂಗ್ರೆಸ್ ಪಕ್ಷದಿಂದ ವಜಾ ಮಾಡಬೇಕು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಅನರ್ಹ ಶಾಸಕ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ನಾನು ದೋಸ್ತಿ ಸರ್ಕಾರದ ಆಡಳಿತದ ವಿರುದ್ಧ ಹಾಗೂ ನನ್ನ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ಆಗಿಲ್ಲ ಎಂದು ಮನನೊಂದು ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದರು.

ಈ ಕ್ಷಣದವರೆಗೂ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿ ನಾನು ಮಾತನಾಡಿಲ್ಲ. ಆದರೆ ಕಾಂಗ್ರೆಸ್ ಪಕ್ಷದವರೇ ನನ್ನನ್ನು ವಜಾ ಮಾಡಿ ಅನರ್ಹ ಮಾಡಿದ್ದಾರೆ. ಬಸವಣ್ಣನವರು, ಅಂಬೇಡ್ಕರ್ ಆದ ಮೇಲೆ ನಾನು ಇದ್ದೀನಿ ಎಂದು ಈ ರಾಜ್ಯಕ್ಕೆ ಹೇಳಿಕೊಂಡು ತಿರುಗುತ್ತಿರುವ ಇವರ ಬಗ್ಗೆ ಸುಪ್ರೀಂ ಕೋರ್ಟ್ ಹೇಳುತ್ತೆ. ಮುಂದಿನ ದಿನಗಳಲ್ಲಿ ಈ ಜನರ ಆಶೀರ್ವಾದದಿಂದ ಮತ್ತೆ ನಾನು ಶಾಸಕನಾಗಿ ಸದನಕ್ಕೆ ಹೋಗುತ್ತೇನೆ. ಸದನದಲ್ಲಿ ಯಾವ ರೀತಿ ನಮ್ಮ ಮನಸ್ಸುಗಳನ್ನು ನೋಯಿಸಿದ್ದರು. ಅದೇ ರೀತಿ ನಿಮ್ಮ ವ್ಯಕ್ತಿತ್ವದ ಚರಿತ್ರೆಯನ್ನು ರಾಜ್ಯದ ಜನರ ಮುಂದಿಡುವ ಕೆಲಸ ಮಾಡುವೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.

ಇದೇ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಹರಿಹಾಯ್ದ ಸುಧಾಕರ್, ಯಾವ ಕಾರಣಕ್ಕೆ ನನ್ನನ್ನ ಅನರ್ಹ ಮಾಡಿದ್ದೀರಿ? ಯಾವುದೇ ವಿಚಾರಣೆ ತನಿಖೆ ಆಗದೆ ಹೇಗೆ ಅನರ್ಹ ಮಾಡಿದ್ರೀ? ಕಾಂಗ್ರೆಸ್ ಪಕ್ಷದ ವಿರುದ್ಧ ನಾನು ಏನು ಮಾಡಿದ್ದೀನಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಮೌಲ್ಯಗಳು ಇದ್ರೆ ಮೊದಲು ರಮೇಶ್ ಕುಮಾರ್ ಅವರನ್ನು ವಜಾ ಮಾಡಲಿ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಮಾಜಿ ಸಚಿವ ಹಾಗೂ ಹಾಲಿ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ವಿರುದ್ಧವೂ ಕಿಡಿಕಾರಿದ ಸುಧಾಕರ್, ಎಂಎಲ್‍ಸಿ ಚುನಾವಣೆಯಲ್ಲಿ ಜೆಡಿಎಸ್ ಪರ ಶಿವಶಂಕರರೆಡ್ಡಿ ಕೆಲಸ ಮಾಡಲಿಲ್ವಾ? ಪಕ್ಕದ ಕ್ಷೇತ್ರದ ಕಾಂಗ್ರೆಸ್ ಶಾಸಕನಾದ ನನ್ನನ್ನ ರಾಜಕೀಯವಾಗಿ ಮುಗಿಸುವಂತಹ ಕೆಲಸ ಮಾಡಲಿಲ್ವಾ? ಹೀಗಾಗಿ ಮೊದಲು ಅವರನ್ನು ಪಕ್ಷದಿಂದ ವಜಾ ಮಾಡಿ. ನಿಮ್ಮ ನೈತಿಕತೆ ನನಗೆ ಹೇಳಿ ಕೊಡ್ತೀರಾ. ನಿಮಗೆ ನೈತಿಕತೆ ಇದೆಯಾ ಜನ ನೋಡ್ತಾ ಇದ್ದಾರೆ ನಾನು ಒಬ್ಬ ವ್ಯಕ್ತಿ (ಸಿದ್ದರಾಮಯ್ಯ) ಯಿಂದ ಇಷ್ಟೆಲ್ಲಾ ನೋವು ತಡೆದುಕೊಂಡಿದ್ದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *