ದೆಹಲಿಯಿಂದ ಬಂದ 8 ಮಂದಿಯಲ್ಲಿ ಓರ್ವನಿಗೆ ಕೊರೊನಾ ಸೋಂಕು

Public TV
1 Min Read

ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರಿನಲ್ಲಿ ಮತ್ತೊಂದು ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಅಂದಹಾಗೆ ಈಗಾಗಲೇ ಗೌರಿಬಿದನೂರು ನಗರದ 10 ಮಂದಿಗೆ ಸೋಂಕು ದೃಢವಾಗಿ ಓರ್ವ ವೃದ್ಧೆ ಮೃತಪಟ್ಟಿದ್ದರು.

ಈಗ ದೆಹಲಿಯಿಂದ ವಾಪಸ್ ಆದ 23 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿದ್ದು ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಈ ಹೊಸ ಪ್ರಕರಣದಿಂದ ಗೌರಿಬಿದನೂರಿನಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಮಾರ್ಚ್ 6 ರಂದು ದೆಹಲಿಯ ನಿಜಾಮುದ್ದೀನ್ ನಿಂದ ರೈಲಿನ ಮೂಲಕ ಗೌರಿಬಿದನೂರು ಗಡಿಭಾಗ ಆಂಧ್ರದ ಹಿಂದೂಪುರಕ್ಕೆ ಆಗಮಿಸಿ, ಅಲ್ಲಿಂದ ಬಸ್ ಮೂಲಕ ಗೌರಿಬಿದನೂರು ನಗರಕ್ಕೆ ಆಗಮಿಸಿದ್ದಾನೆ.

ತನ್ನ ಮನೆಗೆ ಬಂದು ತನ್ನ ತಾಯಿ ಜೊತೆ ವಾಸವಾಗಿದ್ದ ಯುವಕನ ಮನೆಗೆ ಈತನ ಅಕ್ಕ-ಬಾವ ಹಾಗೂ ಇಬ್ಬರು ಮಕ್ಕಳ ಸಹ ಬಂದು ಹೋಗಿದ್ದಾರೆ. ಮತ್ತೊಂದೆಡೆ ಈತ ತನ್ನ ಸ್ನೇಹಿತನ ಜೊತೆಗೂಡಿ ಆಂಧ್ರದ ಹಿಂದೂಪುರಕ್ಕೆ ನಾಲ್ಕೈದು ಬಾರಿ ಹೋಗಿ ಬಂದಿದ್ದಾನೆ. ದೆಹಲಿಯ ನಿಜಾಮುದ್ದೀನ್ ಪ್ರಕರಣ ಬಯಲಾದ ನಂತರ ಈತನನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇಂದು ಈತನ ವರದಿ ಲಭ್ಯವಾಗಿದ್ದು ಪಾಸಿಟಿವ್ ಬಂದಿದೆ.

ಹೀಗಾಗಿ ಯುವಕನ ತಾಯಿ, ಅಕ್ಕ-ಬಾವ ಹಾಗೂ ಅವರ ಇಬ್ಬರು ಮಕ್ಕಳು ಸೇರಿದಂತೆ ಸ್ನೇಹಿತ ಹಾಗೂ ಸ್ನೇಹಿತನ ತಾಯಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಯುವಕ ಸೇರಿದಂತೆ 8 ಮಂದಿ ದೆಹಲಿಯ ಜಮಾತ್ ಗೆ ಹೋಗಿ ಬಂದಿದ್ದು, ಇವರಲ್ಲಿ ಈತನಿಗೆ ಬಿಟ್ಟು ಬೇರೆ ಯಾರಿಗೂ ಸೋಂಕು ತಗುಲಿಲ್ಲ. ಹೀಗಾಗಿ ಈತನಿಗೆ ದೆಹಲಿಯಲ್ಲೇ ಸೋಂಕು ತಗಲಿದೆಯಾ ಅಥವಾ ಹಿಂದೂಪುರದಲ್ಲಿ ಸಹ ಸಾಕಷ್ಟು ಪಾಸಿಟಿವ್ ಪ್ರಕರಣಗಳಿದ್ದು ಅಲ್ಲಿ ಏನಾದ್ರೂ ಸೋಂಕು ತಗುಲಿದೆಯಾ ಅನ್ನೋ ಅನುಮಾನ ಜಿಲ್ಲಾಡಳಿತಕ್ಕೆ ಮೂಡಿದೆ.

ಹೀಗಾಗಿ ಪೇಷೆಂಟ್ ನಂಬರ್ 180ರ ಮತ್ತಷ್ಟು ಟ್ರಾವೆಲ್ ಹಿಸ್ಟರಿ ಕಲೆ ಹಾಕುವಲ್ಲಿ ಪೊಲೀಸರು ನಿರತರಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ವಹಿಸಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್ ಲತಾ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *