ಕಾರ್ಮಿಕರನ್ನ ಕರೆದೊಯ್ಯುತ್ತಿದ್ದ ಬಸ್ ಪಲ್ಟಿ – 30 ಮಂದಿ ಆಸ್ಪತ್ರೆಗೆ ದಾಖಲು

Public TV
1 Min Read

ಚಿಕ್ಕಬಳ್ಳಾಪುರ: ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ 30 ಮಂದಿ ಕಾರ್ಮಿಕರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ನಡೆದಿದೆ.

ಗೌರಿಬಿದನೂರು ನಗರ ಹೊರವಲಯದ ನೂತನ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆ ಎದುರು ಘಟನೆ ನಡೆದಿದ್ದು, ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಗೌರಿಬಿದನೂರು ತಾಲೂಕಿನ ಶ್ರಾವಂಡಹಳ್ಳಿ, ಚಂದನದೂರು, ಮಧುಗಿರಿ ತಾಲೂಕಿನ ಯಾಕರ್ಲಹಳ್ಳಿ, ಕೊಡಗೇನಹಳ್ಳಿ ಕಡೆಯವರು ಎಂದು ತಿಳಿದುಬಂದಿದೆ.

ದೊಡ್ಡಬಳ್ಳಾಪುರದ ಎವರ್ ಬ್ಲೂ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಕೆಲಸ ಮುಗಿಸಿ ಫ್ಯಾಕ್ಟರಿಗೆ ಸೇರಿದ ಖಾಸಗಿ ಬಸ್ಸಿನಲ್ಲೇ ಮನೆಗೆ ವಾಪಾಸ್ಸಾಗುತ್ತಿದ್ದರು. ಆದರೆ ಗೌರಿಬಿದನೂರು ನಗರಕ್ಕೆ ಎಂಟ್ರಿ ಕೊಡುವ ಆರಂಭದಲ್ಲೇ ನೂತನ ರಸ್ತೆ ನಿರ್ಮಾಣ ಮಾಡಿದ್ದು, ರಸ್ತೆ ಮಧ್ಯೆ ಭಾಗ ಹೊಸದಾಗಿ ರಸ್ತೆ ವಿಭಜಕ ಆಳವಡಿಸಲಾಗಿದೆ. ಈ ರಸ್ತೆ ವಿಭಜಕದ ಬಗ್ಗೆ ಅರಿವಿಲ್ಲದ ಚಾಲಕ ರಸ್ತೆ ವಿಭಜಕದ ಮೇಲೆ ಬಸ್ ಹರಿಬಿಟ್ಟಿದ್ದಾನೆ.

ವಿಭಜಕದ ಮೇಲೆ ಬಸ್ ಹತ್ತಿದ ಪರಿಣಾಮ ಬಸ್ ಉರುಳಿದೆ. ಹೀಗಾಗಿ 30 ಮಂದಿ ಗಾಯಗೊಂಡು ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *