ಭೋಗನಂಧಿಶ್ವರನ ಆಲಯಕ್ಕೆ ಬಂದು ಬೆಂಗ್ಳೂರು ವ್ಯಕ್ತಿ ಆತ್ಮಹತ್ಯೆ

Public TV
1 Min Read

ಚಿಕ್ಕಬಳ್ಳಾಪುರ: ತಾಲೂಕಿನ ಪುರಾತನ ಪ್ರಸಿದ್ಧ ನಂದಿ ಗ್ರಾಮದ ಶ್ರೀ ಭೋಗನಂದಿಶ್ವರನ ಆಲಯಕ್ಕೆ ಬಂದ ಭಕ್ತನೊರ್ವ ದೇವಾಲಯದ ಆವರಣದ ಸಾಲುಮಂಟಪದ ಬಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೂಲತಃ ಚಿಕ್ಕಬಳ್ಳಾಪುರದ ಹಾಗೂ ಹಾಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ವಾಸವಾಗಿರುವ 55 ವರ್ಷದ ಶ್ರೀರಾಮ ಎಂಬಾತ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಗುರುವಾರ ರೈಲಿನ ಮೂಲಕ ಯಲಹಂಕದಿಂದ ಚಿಕ್ಕಬಳ್ಳಾಪುರಕ್ಕೆ ಟಿಕೆಟ್ ತೆಗೆದುಕೊಂಡಿರುವ ಶ್ರೀರಾಮ, ನಂದಿ ರೈಲ್ವೆ ನಿಲ್ದಾಣದಲ್ಲಿಳಿದು ನಂದಿ ಗ್ರಾಮದ ಶ್ರೀ ಭೋಗನಂದೀಶ್ವರನ ದೇವಾಲಯಕ್ಕೆ ಆಗಮಿಸಿದ್ದಾನೆ.

ತಡರಾತ್ರಿ ದೇವಾಲಯದ ಸಾಲುಮಂಟಪಗಳ ಬಳಿ ಮದ್ಯಪಾನ, ಧೂಮಪಾನ ಮಾಡಿನಂತರ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಾಲುಮಂಟಪದ ಕಲ್ಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಳಗ್ಗೆ ದೇವಾಲಯಕ್ಕೆ ಬಂದ ಭಕ್ತರು ಆತ್ಮಹತ್ಯೆ ದೃಶ್ಯ ಕಂಡು ಶಾಕ್ ಆಗಿದ್ದು ನಂದಿಗಿರಿಧಾಮ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಮೃತನ ಜೇಬಿನಲ್ಲಿ ಕೃಷ್ಣಪ್ಪ ಪ್ರಶಾಂತನಗರ ಬ್ಯಾಡ್ ಟೈಂ ಅಂತ ಬರೆದಿದ್ದ ಚೀಟಿ ಸಿಕ್ಕಿತ್ತು. ಹೀಗಾಗಿ ಪೊಲೀಸರು ಚಿಕ್ಕಬಳ್ಳಾಪುರದ ಪ್ರಶಾಂತನಗರದಲ್ಲಿ ವಿಚಾರ ನಡೆಸಿದಾಗ ಮೃತಪಟ್ಟ ವ್ಯಕ್ತಿ ಕೃಷ್ಣಪ್ಪ ಅಲ್ಲ ಬದಲಾಗಿ ಆತನ ತಮ್ಮ ಶ್ರೀರಾಮ ಅಂತ ಪತ್ತೆಯಾಗಿದೆ.

ಮೃತ ವ್ಯಕ್ತಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನೆಲೆಸಿದ್ದು ಕಾಮಾಕ್ಷಿ ಪಾಳ್ಯದಲ್ಲಿ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಗ್ ವರ್ಕ್ ಶಾಪ್ ಇಟ್ಟುಕೊಂಡಿದ್ದನಂತೆ. ಮೃತನಿಗೆ ಪತ್ನಿ, ಓರ್ವ ಮಗ ಹಾಗೂ ಮಗಳಿದ್ದಾರೆ. ಇಬ್ಬರಿಗೆ ವಿವಾಹವಾಗಿ ಮಲ್ಲೇಶ್ವರಂನಲ್ಲಿ ಸ್ವಂತ ಮನೆ ಹೊಂದಿದ್ದಾನೆ. ಆಗಾಗ್ಗೆ ನಮ್ಮ ಮನೆಗೆ ಬಂದು ಹೋಗುತ್ತಿದ್ದನು. ಆದರೆ ಈ ರೀತಿ ಯಾಕೆ ಮಾಡಿಕೊಂಡ ನಮಗೆ ಗೊತ್ತಾಗುತ್ತಿಲ್ಲ. ಕೌಟುಂಬಿಕ ಸಮಸ್ಯೆಗಳಿಂದ ಈ ರೀತಿ ಮಾಡಿಕೊಂಡಿರಬಹುದು ಅಂತ ಮೃತನ ಸಹೋದರ ಕೃಷ್ಣಪ್ಪ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *