ಭಾಗ್ಯಲಕ್ಷ್ಮಿ ಬಾಂಡ್‍ಗೆ 5 ಸಾವಿರ ಲಂಚ – ಅಂಗನವಾಡಿ ಕಾರ್ಯಕರ್ತೆಗೆ ಗ್ರಾಮಸ್ಥರಿಂದ ತರಾಟೆ

Public TV
1 Min Read

ಚಿಕ್ಕಬಳ್ಳಾಪುರ: ಅಂಗನವಾಡಿ ಕಾರ್ಯಕರ್ತೆಯ ಬೇಜವಾಬ್ದಾರಿ ನಡತೆಗೆ ಬೇಸತ್ತ ಗ್ರಾಮಸ್ಥರು ಆಕೆಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಅಬ್ಲೂಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ವೆಂಕಟಲಕ್ಷ್ಮಮ್ಮ ಅವರ ಮೇಲೆ ಗ್ರಾಮಸ್ಥರು ಆರೋಪ ಮಾಡಿದ್ದು, ಮಕ್ಕಳಿಗೆ ಸರ್ಕಾರದಿಂದ ವಿತರಣೆಯಾಗುವ ಆಹಾರ ಪದಾರ್ಥಗಳನ್ನ ಸರಿಯಾದ ಪ್ರಮಾಣದಲ್ಲಿ ವಿತರಣೆ ಮಾಡುತ್ತಿಲ್ಲ. ಅಲ್ಲದೆ ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಕರ್ತವ್ಯಕ್ಕೂ ಸರಿಯಾಗಿ ಹಾಜರಾಗುವುದಿಲ್ಲ ಎಂದು ದೂರಿದ್ದಾರೆ.

ಹೆಣ್ಣು ಮಗು ಜನಿಸಿದ್ರೆ ಭಾಗ್ಯಲಕ್ಷ್ಮಿ ಬಾಂಡ್ ಅನ್ನು ಅಂಗನವಾಡಿಯಲ್ಲಿ ವಿತರಣೆ ಮಾಡಲಾಗುತ್ತಿದೆ. ಆದರೆ ಇದರಲ್ಲಿಯೂ ಸಾಕಷ್ಟು ಅವವ್ಯಹಾರ ನಡೆಯುತ್ತಿದೆ ಎಂದು ವೆಂಕಟಲಕ್ಷಮ್ಮ ವಿರುದ್ಧ ದೂರಿದ್ದಾರೆ. ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಲು 5 ಸಾವಿರ ಹಣಕ್ಕಾಗಿ ಪೀಡಿಸುವುದಲ್ಲದೆ, ಮಕ್ಕಳ ಹಾಜರಾತಿ ಸರ್ಕಾರಕ್ಕೆ ಹೆಚ್ಚುವರಿಯಾಗಿ ತೋರಿಸಿ ಹೆಚ್ಚಿನ ಪದಾರ್ಥಗಳನ್ನು ಹಾಗೂ ಸೌಲಭ್ಯಗಳು ಪಡೆಯುತ್ತಿದ್ದಾರೆ. ಆಹಾರ ಪದಾರ್ಥಗಳನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸದ್ಯ ಅಂಗನವಾಡಿ ಕಾರ್ಯಕರ್ತೆಯನ್ನು ಈ ಬಗ್ಗೆ ಪ್ರಶ್ನಿಸಿದಾಗ ನಾನು ಯಾವುದೇ ಮೋಸ ಮಾಡಿಲ್ಲ. ಇದೆಲ್ಲ ಸುಳ್ಳು ಸುದ್ದಿ ಬೇಕಾದ್ರೆ ಇದುವರೆಗೂ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮಾಡಿದವರನ್ನು ಕೇಳಿ ಎಂದು ತನ್ನ ಮೇಲೆ ಇದ್ದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಒಟ್ಟಾರೆಯಾಗಿ ಈ ಗ್ರಾಮದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರದ ಬಗ್ಗೆ ಗ್ರಾಮಸ್ಥರು ದೂರು ನೀಡಿದ್ದು, ಇದರಲ್ಲಿ ಯಾರದ್ದು ತಪ್ಪು ಸರಿ ಎಂಬುದನ್ನು ಮಾತ್ರ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ ಮಕ್ಕಳಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *