ಅನಾಥವಾಯ್ತು ರಾಜ್ಯದ ಏಕೈಕ ಏರೋಪೋನಿಕ್ಸ್ ಆಲೂಗಡ್ಡೆ ಬೀಜೋತ್ಪಾದನಾ ಕೇಂದ್ರ

Public TV
2 Min Read

– 5.5 ಕೋಟಿ ರೂ. ವೆಚ್ಚದಲ್ಲಿ ಆರಂಭವಾಗಿದ್ದ ಕೇಂದ್ರ

ಚಿಕ್ಕಬಳ್ಳಾಪುರ: ಭಾರತ ಕೃಷಿ ಪ್ರಧಾನ ರಾಷ್ಟ್ರ. ಜನರ ಬಹುಮುಖ್ಯ ಕಸುಬು ವ್ಯವಸಾಯ ಆಗಿರುವುದರಿಂದ ಸರ್ಕಾರಗಳು ರೈತರ ಶ್ರೇಯೋಭಿವೃದ್ಧಿಗೆ ವಿವಿಧ ಯೋಜನೆಗಳನ್ನ ರೂಪಿಸುತ್ತಿರುತ್ತವೆ. ಅದರಲ್ಲಿ ಕರ್ನಾಟಕ ಸರ್ಕಾರ ರಾಜ್ಯದ ರೈತರ ಅನುಕೂಲಕ್ಕಾಗಿ ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ 3.5 ಕೋಟಿ ವೆಚ್ಚದಲ್ಲಿ 2015 ಜನವರಿ 9 ರಂದು ಅತ್ಯಾಧುನಿಕ ಮಾದರಿಯ ರಾಜ್ಯದ ಮೊಟ್ಟಮೊದಲ ಏರೋಪೋನಿಕ್ಸ್ ತಂತ್ರಜ್ಞಾನದ ಆಲೂಗಡ್ಡೆ ಬೀಜೋತ್ಪಾದನಾ ಕೇಂದ್ರವನ್ನ ಆರಂಭ ಮಾಡಿತ್ತು.

2 ವರ್ಷ ನಿಗದಿತ ಅವಧಿಕೊಟ್ಟು ಆರಂಭ ಮಾಡಿತ್ತಾದರೂ, ಅವಧಿ ಮೀರಿ 3 ವರ್ಷವಾದರೂ ಇದುವರೆಗೂ ಗುರಿ ಸಾಧಿಸಲೇ ಇಲ್ಲ. ರಾಜ್ಯದಲ್ಲಿ ಹಾಸನ ಬಿಟ್ಟರೆ, ಅತಿ ಹೆಚ್ಚು ಆಲೂಗಡ್ಡೆ ಉತ್ಪಾದನೆ ಮಾಡೋದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ. ಉತ್ತಮ ಗುಣಮಟ್ಟದ ಆಲೂಗಡ್ಡೆ ಬಿತ್ತನೆ ಬೀಜಗಳನ್ನ ದೂರದ ಪಂಜಾಬ್ ನಿಂದ ತರಿಸಿಕೊಳ್ಳಬೇಕಾಗಿದ್ದರಿಂದ ಆರ್ಥಿಕವಾಗಿ ಸರ್ಕಾರ ಹಾಗೂ ರೈತರಿಗೆ ಹೊರೆಯಾಗುತ್ತಿತ್ತು. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ, 2015ರಲ್ಲಿ ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಹೊರವಲಯದ ನಂದಿ ಕ್ರಾಸ್ ನ ಪಿಆರ್ ಎಸ್ ತೋಟಗಾರಿಕಾ ಕೇಂದ್ರದಲ್ಲಿ ಏರೋಪೋನಿಕ್ಸ್ ತಂತ್ರಜ್ಞಾನದ ಈ ಆಲೂಗಡ್ಡೆ ಬೀಜೋತ್ಪಾದನಾ ಕೇಂದ್ರವನ್ನ ಉದ್ಘಾಟಿಸಿತು.

ಏರೋಪೋನಿಕ್ಸ್ ಕೇಂದ್ರಕ್ಕೆ 3.5 ಕೋಟಿ ಸೇರಿದಂತೆ ಸಂಸ್ಕರಣಾ ಕಟ್ಟಡಕ್ಕೆ 2 ಕೋಟಿ ಖರ್ಚು ಮಾಡಿ ಬರೋಬ್ಬರಿ 5.5 ಕೋಟಿ ವೆಚ್ಚದಲ್ಲಿ ಆರಂಭವಾದ ಈ ಕೇಂದ್ರ ಇದುವರೆಗೂ ಸಮಪರ್ಕವಾಗಿ ಕಾರ್ಯ ನಿರ್ವಹಣೆ ಮಾಡದ ಹಿನ್ನೆಲೆ ಹಾಗೂ ಸೂಕ್ತ ನಿರ್ವಹಣೆ ಕೊರತೆಯ ಕಾರಣ ಇಂದು ಶಿಥಿಲಾವಸ್ಥೆಗೆ ತಲುಪಿದೆ. ಹೀಗಾಗಿ ದೂರದ ಜಲಂಧರ್ ನಿಂದ ಆಲೂಗಡ್ಡೆ ಬಿತ್ತನೆ ಬೀಜಗಳನ್ನ ಖರೀದಿ ಮಾಡುಕೊಳ್ಳುತ್ತಿದ್ದ ರೈತರು ಇನ್ನೇನು ನಮ್ಮಲ್ಲೇ ಬಿತ್ತನೆ ಬೀಜ ಸಿಗುತ್ತೆ ಅಂತ ಆಸೆಗಣ್ಣಿನಿಂದ ಕಾದ ರೈತರ ಆಸೆಗಳಿಗೆ ತಣ್ಣೀರೆರಚಿದಂತಾಗಿದೆ. ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣಕ್ಕೆ ಬೆಲೆಯೇ ಇಲ್ಲದಂತಾಗಿದೆ ಅಂತ ರೈತರು ಅಸಮಾಧಾನ ಹೊರಹಾಕ್ತಿದ್ದಾರೆ.

ಏನಿದು ಏರೋಪೋನಿಕ್ಸ್ ತಂತ್ರಜ್ಞಾನ?
ಏರೋಪೋನಿಕ್ಸ್ ತಂತ್ರಜ್ಞಾನದ ಮೂಲಕ ಬೇರುಗಳಿಗೆ ಮಣ್ಣು ತಾಗಿಸದೇ ಗಾಳಿ ಮತ್ತು ಮಂಜಿನ ವಾತಾವರಣದಲ್ಲಿ 19 ಅಂಶಗಳುಳ್ಳ ಆಹಾರ ಪದಾರ್ಥವನ್ನ ದ್ರವ್ಯ ರೂಪದಲ್ಲಿ ನೀಡಿ ಬಿತ್ತನೆ ಆಲೂಗಡ್ಡೆಯನ್ನ ಬೆಳೆಸುವುದು ಈ ಕೇಂದ್ರದ ಉದ್ದೇಶವಾಗಿತ್ತು. ಆದರೆ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರಿಗೆ ಉತ್ತಮ ಬಿತ್ತನೆ ಬೀಜ ನೀಡಲು ಸಾಧ್ಯವಾಗದೇ, ಕೋಟ್ಯಂತರ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಈ ವಿಚಾರವಾಗಿ ಖಾಸಗಿಯವರಿಗೆ ಟೆಂಡರ್ ನೀಡಿದ್ದು, ಶೀಘ್ರದಲ್ಲೇ ಅವರಿಗೆ ಹಸ್ತಾಂತರಿಸಿ ರೈತರಿಗೆ ಗುಣಮಟ್ಟದ ಬಿತ್ತನೆ ಆಲೂಗಡ್ಡೆ ನೀಡಲಿದ್ದೇವೆ ಅಂತ ತೋಟಗಾರಿಕಾ ಇಲಖಾ ಉಪನಿರ್ದೇಶಕ ಕುಮಾರಸ್ವಾಮಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *