ಸಿಎಂ ಕುಮಾರಸ್ವಾಮಿ ಪ್ರಧಾನಿ ಮೋದಿ ಭೇಟಿ – ಸಾಲಮನ್ನಾ, ಕಾವೇರಿ ಪ್ರಾಧಿಕಾರ ರಚನೆ ಬಗ್ಗೆ ಚರ್ಚೆ

Public TV
2 Min Read

ನವದೆಹಲಿ: ಬ್ಯಾಂಕ್ ಪರಿಸ್ಥಿತಿ ಉತ್ತಮ ಪಡಿಸಲು ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂ. ಹಣವನ್ನು ಬಾಂಡ್ ಮೂಲಕ ಪಡೆಯುವ ನಿರ್ಧಾರ ಮಾಡಿದೆ. ಈ ಹಣದಲ್ಲಿ ರೈತರ ಸಾಲಮನ್ನಾ ಮಾಡಲು ನೆರವು ನೀಡಲು ಕೇಂದ್ರಕ್ಕೆ ಮನವಿ ಮಾಡಿದ್ದಾಗಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಭೇಟಿ ವೇಳೆ ಚರ್ಚೆ ನಡೆಸಿದ ಅಂಶಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಪ್ರಮುಖವಾಗಿ ಕರ್ನಾಟಕದ ಜನರ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಸಚಿವರ ಗಮನ ಸೆಳೆಯಲು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.

ಗೃಹ ಸಚಿವರ ಭೇಟಿ ವೇಳೆ ರಾಜ್ಯಕ್ಕೆ ಪೊಲೀಸ್ ಇಲಾಖೆ ಭದ್ರತೆಯ ಕೆಲವು ಹೆಚ್ಚುವರಿ ಯೋಜನೆ ಜಾರಿ ತರಲು ಆರ್ಥಿಕ ನೆರವು ಕೇಳಲಾಗಿದೆ. ಪ್ರಕೃತಿ ವಿಕೋಪಕ್ಕೆ ಎನ್‍ಡಿಆರ್ ಎಫ್ ಮೂಲಕ ರಾಜ್ಯಕ್ಕೆ ಕಡಿಮೆ ಹಣ ಬಿಡುಗಡೆ ಆಗಿರುವ ಕುರಿತು ಗಮನ ಸೆಳೆದಿದ್ದು, ಇತರೆ ರಾಜ್ಯಗಳಿಗೆ ನೀಡಿರುವ ಅನುದಾನದ ಪ್ರಮಾಣವನ್ನು ತಿಳಿಸಿ ಚರ್ಚೆ ನಡೆಸಿದ್ದೇವೆ. ಈ ಕುರಿತು ಸಚಿವರು ಆಗಿರುವ ವ್ಯತ್ಯಾಸವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಅಶ್ವಾಸನೆ ನೀಡಿದ್ದಾಗಿ ಸ್ಪಷ್ಟಪಡಿಸಿದರು.

ಬಳಿಕ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ಭೇಟಿ ಮಾಡಿ ರಾಜ್ಯದ ರಸ್ತೆಗಳ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದ್ದಾಗಿ ಹಾಗೂ ರಾಜ್ಯಕ್ಕೆ 34 ಸಾವಿರ ಕೋಟಿ ರೂ. ಯೋಜನೆಗೆ ಒಪ್ಪಿಗೆ ಸಿಕ್ಕಿರುವುದಾಗಿ ತಿಳಿಸಿದರು. ಅಲ್ಲದೇ ಚರ್ಚೆ ವೇಳೆ ಸಾಗರ, ಸಿಗಂಧೂರು, ಹಾಸನ, ತುಮಕೂರು ಹೆದ್ದಾರಿ ಸೇರಿದಂತೆ ಹಲವು ಹೊಸ ಯೋಜನೆಗಳಿಗೆ ಅನುದಾನಕ್ಕೆ ಮನವಿ ಮಾಡಿದ್ದಾಗಿ ತಿಳಿಸಿದರು.

ಕಾವೇರಿ ಪ್ರಾಧಿಕಾರ ರಚನೆ ಗೊಂದಲ: ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕೇದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿರುವ ಲೋಪದೋಷಗಳನ್ನು ಹೆಸರಿಸಿ ಗಮನ ಸೆಳೆದಿರುವುದಾಗಿ ತಿಳಿಸಿದರು. ಪ್ರಮುಖವಾಗಿ ಪ್ರತಿ ಹತ್ತು ದಿನಕ್ಕೆ ಡ್ಯಾಂ ನೀರು ಅಳತೆ ಮಾಡುವುದು, ನಮ್ಮ ರೈತರು ಯಾವ ಬೆಳೆ ಬೆಳೆಯಬೇಕು ಎಂಬುದು ಪ್ರಾಧಿಕಾರ ನಿರ್ಧಾರ ಮಾಡಲಿರುವ ಅವೈಜ್ಞಾನಿಕ ಅಂಶ ಹಾಗೂ ಮಳೆ ಕೊರತೆ ಆಧರಿಸಿ ನೀರು ಬಿಡುವ ವ್ಯವಸ್ಥೆ, ಬೆಳೆ ಬೆಳೆಯುವ ವಿಚಾರಕ್ಕೆ ಸಂಬಂಧಿಸಿದಂತೆ ರೈತರ ಮನವೊಲಿಸುವುದು ಕಷ್ಟ ಎಂಬುವುದನ್ನು ಮನವರಿಕೆ ಮಾಡಿದ್ದಾಗಿ ತಿಳಿಸಿದರು. ಈ ಕುರಿತು ಇನ್ನೊಂದು ಸಭೆ ಸೇರಿ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ. ಅಧಿಸೂಚನೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚೆ ಆಗಬೇಕಿತ್ತು. ಕೆಲ ಬದಲಾವಣೆ ಇದ್ದಲ್ಲಿ ಅಲ್ಲಿ ಚರ್ಚೆ ಬಳಿಕ ಬದಲಾಗಲಿಸಲಾಗುವುದು ಎಂದು ತಿಳಿಸಿದ್ದಾಗಿ ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *