ಅಸ್ತಿತ್ವಕ್ಕಾಗಿ ಕಾಂಗ್ರೆಸ್ಸಿನಿಂದ ಪ್ರತಿಭಟನೆ, ಶೀಘ್ರವೇ 1 ಲಕ್ಷ ರೂ. ಸಂತ್ರಸ್ತರ ಖಾತೆಗೆ ಜಮೆ – ಸಿಎಂ

Public TV
2 Min Read

ಚಿಕ್ಕಮಗಳೂರು: ವಿರೋಧ ಪಕ್ಷ ಯಾವಾಗಲೂ ಚಟುವಟಿಕೆಯಿಂದಿರಬೇಕು. ಹೀಗಾಗಿ ಅಸ್ತಿತ್ವಕ್ಕಾಗಿ ಕಾಂಗ್ರೆಸ್‍ನವರು ಪ್ರತಿಭಟಿಸುತ್ತಿದ್ದಾರೆಯೇ ಹೊರತು ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಜಿಲ್ಲೆಯ ಶೃಂಗೇರಿಯ ಶಾರದಾಂಬೆಯ ದರ್ಶನದ ಬಳಿಕ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಬಂಧನಕ್ಕೆ ಹಾಗೂ ನೆರೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿ ಹಾಕಿದರು. ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿರುವುದರಿಂದ ಅಸ್ತಿತ್ವ ಉಳಿಸಿಕೊಳ್ಳಲು ಸಹಜವಾಗಿಯೇ ಪ್ರತಿಭಟನೆ ನಡೆಸುತ್ತಿದೆ ಎಂದು ಹರಿಹಾಯ್ದರು.

ಶೃಂಗೇರಿ ಶಾರದಾಂಬೆ ಹಾಗೂ ಗೌರಿಗದ್ದೆಯಲ್ಲಿ ಪೂಜೆಗಾಗಿ ಬಂದಿದ್ದೇನೆ. ಹಿಂದೆ ಮಳೆ ಬರಲೆಂದು ಪೂಜೆ ಮಾಡುತ್ತಿದ್ದೆವು. ಇದೀಗ ಮಳೆ ನಿಲ್ಲಲ್ಲೆಂದು ಪೂಜೆ ಮಾಡುವ ಸ್ಥಿತಿಗೆ ಬಂದಿದ್ದೇವೆ. ಯಾರ ಮನೆ ಸಂಪೂರ್ಣ ಹಾಳಾಗಿದೆಯೋ ಅವರಿಗೆ 5 ಲಕ್ಷ ರೂ.ಗಳಲ್ಲಿ 1 ಲಕ್ಷ ರೂ. ನೀಡುವಂತೆ ಸರ್ಕಾರಿ ಆದೇಶ ಹೊರಡಿಸಲಾಗುತ್ತಿದೆ. ಶೀಘ್ರದಲ್ಲಿ 1 ಲಕ್ಷ ರೂ. ಸಂತ್ರಸ್ತರ ಖಾತೆಗೆ ಜಮೆಯಾಗಲಿದೆ ಎಂದು ಮಾಹಿತಿ ನೀಡಿದರು.

ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾದರೂ ಪರವಾಗಿಲ್ಲ, ಸಂತ್ರಸ್ತರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ಕಾಂಗ್ರೆಸ್‍ನವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಅರ್ಥವಿಲ್ಲ. ಕೇಂದ್ರ ಸರ್ಕಾರದಿಂದಲೂ ಶೀಘ್ರವೇ ಪರಿಹಾರ ಹಣ ಬರಲಿದೆ ಎಂದರು.

ಗುರು ಭವನಕ್ಕೆ ತೆರಳಿ ಭಾರತೀ ತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದರು. ಶ್ರೀಗಳ ಆರ್ಶೀವಾದ ಪಡೆದ ಬಳಿಕ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿಗಳಿಗೆ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸಿ.ಟಿ.ರವಿ ಸಾಥ್ ನೀಡಿದರು. ಪೂಜೆ ಬಳಿಕ ಗೌರಿಗದ್ದೆ ಆಶ್ರಮಕ್ಕೆ ಸಿಎಂ ಪ್ರಯಾಣ ಬೆಳೆಸಿದರು.

ಕಳೆದ 6 ದಿನಗಳಿಂದ ಗೌರಿಗದ್ದೆಯ ವಿನಯ್ ಗುರೂಜಿಯವರ ದತ್ತಾಶ್ರಮದಲ್ಲಿ ನಡೆಯುತ್ತಿರುವ ಶತರುದ್ರಯಾಗ, ಗಣಪತಿ ಹೋಮದ ಪೂರ್ಣಾಹುತಿಯಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಅಧಿಕಾರಕ್ಕೂ ಮುನ್ನ ಹಲವು ಬಾರಿ ಆಶ್ರಮಕ್ಕೆ ಭೇಟಿ ನೀಡಿದ್ದ ಬಿಎಸ್‍ವೈ ಇದೀಗ ಯಾಗದಲ್ಲಿ ಭಾಗವಹಿಸುತ್ತಿದ್ದಾರೆ. ಸಿಎಂ ಆಗುವ ಮುನ್ನ ಹೊತ್ತಿದ್ದ ಹರಿಕೆ ತೀರಿಸಲು ತೆರಳುತ್ತಿದ್ದಾರೆ. ಅಧಿಕಾರ ಸಿಕ್ಕರೆ ಆಶ್ರಮದಲ್ಲಿ ಶತರುದ್ರ ಯಾಗ ಹೋಮದ ಮಾಡಿಸುವುದಾಗಿ ಸಿಎಂ ಹರಕೆ ಹೊತ್ತಿದ್ದರು. ಇದೀಗ ಹರಕೆ ತೀರಿಸುತ್ತಿದ್ದಾರೆ. ಆದರೆ, ಮಾಧ್ಯಮದವರಿಗೆ ಉತ್ತರಿಸುವಾಗ ನೆರೆ ಸಮಸ್ಯೆ ಪರಿಹಾರಕ್ಕಾಗಿ ಪೂಜೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *