ಅನರ್ಹ ಶಾಸಕ ನಾರಾಯಣಗೌಡರನ್ನ ಹಾಡಿ ಹೊಗಳಿದ ಬಿಎಸ್‍ವೈ

Public TV
1 Min Read

– ನಾರಾಯಣಗೌಡ ಸಜ್ಜನ, ಪ್ರಾಮಾಣಿಕ ವ್ಯಕ್ತಿ

ಮಂಡ್ಯ: ಕೆ.ಆರ್.ಪೇಟೆಯಲ್ಲಿ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಡಿ ಹೊಗಳಿದ್ದಾರೆ.

ಕೆ.ಆರ್.ಪೇಟೆಯ ಕೆಪಿಎಸ್ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಬೃಹತ್ ಉಚಿತ ಆರೋಗ್ಯ ಮೇಳ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ, ಸಚಿವ ಆರ್.ಅಶೋಕ್, ಸಂಸದೆ ಸುಮಲತಾ, ಅನರ್ಹ ಶಾಸಕ ನಾರಾಯಣಗೌಡ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಿಎಂ ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ನಾರಾಯಣಗೌಡ ಅವರ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ನಾನು ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ಬರುವ ಹಾಗೆ ಇರಲಿಲ್ಲ. ಆದರೆ ಕೆ.ಸಿ.ನಾರಾಯಣಗೌಡ ಅವರಿಗೆ ಭರವಸೆ ನೀಡಿದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅನೇಕ ಶಾಸಕರನ್ನು, ಮುಖಂಡರನ್ನು ನೋಡಿದ್ದೇನೆ. ಆದರೆ ನಾರಾಯಣಗೌಡ ಅವರಂತಹ ಸಜ್ಜನ, ಪ್ರಾಮಾಣಿಕ ವ್ಯಕ್ತಿ ರಾಜಕೀಯ ಕ್ಷೇತ್ರದಲ್ಲಿ ಸಿಗುವುದು ಅಪರೂಪ. ಇಂತಹ ವ್ಯಕ್ತಿಯನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ರಿ. ಆದರೆ ಬೇರೆ ಕಾರಣಗಳಿಗೆ ವ್ಯತ್ಯಾಸಗಳಾಗಿರಬಹುದು. ಮುಂಬರುವ ದಿನಗಳಲ್ಲೂ ಇವರಿಗೆ ನೀವು ಆಶೀರ್ವಾದ ಮಾಡಬೇಕು ಎಂದು ಮತದಾರರಿಗೆ ಮನವಿ ಮಾಡಿಕೊಂಡರು.

ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಾರಾಯಣಗೌಡ ಕಂಕಣ ತೊಟ್ಟಿದ್ದಾರೆ. ಕೆಆರ್ ಪೇಟೆ ಅಭಿವೃದ್ಧಿಗೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಮಂತ್ರಿ ಮಂಡಲದಲ್ಲಿ ಚರ್ಚೆ ಮಾಡುತ್ತೇನೆ. ಏನು ಮಾಡಲು ಸಾಧ್ಯವೋ ಎಲ್ಲವನ್ನೂ ನಾನು ಮಾಡಲು ಸಿದ್ಧ ಎಂದು ಭರವಸೆ ನೀಡಿದರು.

ಬಳಿಕ ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಆಯಿತು, ಈಗ ಕೆಆರ್ ಪೇಟೆಗೆ ಆಗಬೇಕು. ನಿಮ್ಮ ತಂದೆ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಕೊಡಬೇಕು ಎಂದು ಸಿಎಂಗೆ ಮನವಿ ಸಲ್ಲಿಸಿದರು. ಇದೇ ವೇಳೆ ಸಿಎಂ ಯಡಿಯೂರಪ್ಪ ಅವರಿಗೆ ಬೆಳ್ಳಿ ಖಡ್ಗ ನೀಡಿ ಅಭಿನಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *