ರಾಮನಗರ: ಮಹಾಮಾರಿ ಕೊರೊನಾ ಎಫೆಕ್ಟ್ ಕೋಳಿ ಉದ್ಯಮದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಕೋಳಿ ಸಾಕಣಿಕೆದಾರರು ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಲು ಮುಂದಾಗಿದ್ದು, 75 ಸಾವಿರ ಕೋಳಿಗಳ ಪೈಕಿ 17 ಸಾವಿರ ಕೋಳಿಗಳನ್ನು ಜೀವಂತವಾಗಿ ಗುಂಡಿಯಲ್ಲಿ ಸಮಾಧಿ ಮಾಡಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.
ಚನ್ನಪಟ್ಟಣದ ಫಯಾಜ್ ಅಹಮದ್ ಹಾಗೂ ರಿಯಾಜ್ ಅಹಮದ್ ಎಂಬವರು ಚಿಕನ್ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ತಾವು ಸಾಕಾಣಿಕೆ ಮಾಡುತ್ತಿದ್ದ ಕೋಳಿ ಫಾರಂ ಬಳಿಯೇ ಜೆಸಿಬಿ ಯಂತ್ರದ ಸಹಾಯದಿಂದ ಗುಂಡಿ ತೆಗೆದು 17 ಸಾವಿರ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಚಿಕನ್ ತಿಂದ್ರೆ ಕೊರೊನಾ ಬರುತ್ತೆ ಎಂಬ ವದಂತಿಯಿಂದ ಕೋಳಿ ಮಾಂಸವನ್ನೇ ಕೇಳುವವರಿಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ 80ರಿಂದ 100 ರೂ. ಇದ್ದ ಕೆಜಿ ಕೋಳಿ ಮಾಂಸ ಮತ್ತೆ ಕುಸಿದಿದ್ದು, ಪೌಲ್ಟ್ರಿ ಸೆಂಟರ್ ಮಾಲೀಕರು ಕೋಳಿ ಮಾಂಸ ಮಾರಾಟದಿಂದ ಹಿಂದೆ ಸರಿಯುತ್ತಿದ್ದಾರೆ.
ಕೋಳಿ ಸಾಕಣಿಕೆದಾರರು ಸಾಕಿದ ಕೋಳಿಗಳನ್ನು ಕೆಜಿಗೆ 2ರಿಂದ 3 ರೂ. ಕೇಳುತ್ತಿದ್ದಾರೆ. ಕಳೆದ ವಾರ 10ರಿಂದ 15 ರೂ. ಇತ್ತು, ಅಲ್ಪ ಸ್ವಲ್ಪನಾದ್ರೂ ಮಾರಾಟ ಮಾಡಬಹುದಿತ್ತು. ಆದರೆ ಇದೀಗ ಕೋಳಿಯನ್ನು ಕೇಳುವವರೇ ಇಲ್ಲದಂತಾಗಿದೆ.
ಈ ಹಿನ್ನೆಲೆಯಲ್ಲಿ ಉಚಿತವಾಗಿ ಸಾರ್ವಜನಿಕರಿಗೆ ನೀಡಲು ಮುಂದಾದ್ರೂ ಸಹ ಕೋಳಿಯನ್ನು ತೆಗೆದುಕೊಂಡು ಹೋಗುವವರೇ ಇಲ್ಲದಂತಾಗಿದೆ. ಹೀಗಾಗಿ ಕೋಳಿ ಫಾರಂ ಬಳಿಯೇ ಜೆಸಿಬಿ ಯಂತ್ರದ ಮೂಲಕ 5 ಗುಂಡಿಗಳನ್ನು ತೆಗೆದು ಸುಮಾರು 17 ಸಾವಿರ ಕೋಳಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ್ದಾರೆ.
ಕೋಳಿ ತಿಂದರೆ ಕೊರೊನಾ ಬರಲ್ಲ ಎಂಬ ಬಗ್ಗೆ ಜಿಲ್ಲಾಡಳಿತದಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿಲ್ಲ. ಹಾಗಾಗಿ ಸಾರ್ವಜನಿಕರು ಸಹ ಚಿಕನ್ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಸುಮಾರು 80 ಲಕ್ಷ ರೂ. ಕೋಳಿ ಫಾರಂಗೆ ಹಾಕಿದ್ದು, ಇದೀಗ ಸಂಪೂರ್ಣವಾಗಿ ನಷ್ಟವಾಗಿದೆ. ಕೋಳಿಗಳನ್ನು ಜೀವಂತವಾಗಿ ಗುಂಡಿಗಳಲ್ಲಿ ಸಮಾಧಿ ಮಾಡ್ತಿದ್ದೇವೆ. ಸರ್ಕಾರ ಕುಕ್ಕುಟೋದ್ಯಮದ ಕಡೆಗೂ ಗಮನ ಹರಿಸಿ ಪರಿಹಾರ ನೀಡುವಂತಾಗಬೇಕು ಎಂದು ಫಾರಂ ಮಾಲೀಕ ಫಯಾಜ್ ಅಹಮದ್ ತಿಳಿಸಿದರು.