200 ರೂ. ದೇಣಿಗೆ ನೀಡಿ ನನ್ನ ಜೊತೆ ಡ್ಯಾನ್ಸ್ ಮಾಡಿ: ಶ್ರೀಯಾ ಶರಣ್

Public TV
2 Min Read

ಚೆನ್ನೈ: ಕೊರೊನಾ ವಿರುದ್ಧದ ಹೋರಾಟಕ್ಕೆ 200 ರೂ. ದೇಣಿಗೆ ನೀಡಿ ನನ್ನ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಪಡೆಯಿರಿ ಎಂದು ನಟಿ ಶ್ರೀಯಾ ಶರಣ್ ಅವರು ಹೇಳಿದ್ದಾರೆ.

ಕೊರೊನಾ ವಿರುದ್ಧ ಹೋರಾಟದಲ್ಲಿ ಇಡೀ ದೇಶವೇ ಮಗ್ನವಾಗಿದೆ. ಹೀಗಿರುವಾಗ ಕೆಲ ನಟ-ನಟಿಯರು ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಕೈ ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಹಣದ ರೂಪದಲ್ಲಿ ಸಹಾಯ ಮಾಡಿದರೆ, ಮತ್ತೆ ಕೆಲವರು ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರ ನೀಡುವ ಮೂಲಕ ನೆರವಾಗುತ್ತಿದ್ದಾರೆ.

ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ನಟಿಸಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ಶ್ರೀಯಾ ಶರಣ್ ಕೂಡ ಕೊರೊನಾ ವಿರುದ್ಧದ ಯುದ್ಧಕ್ಕೆ ತನ್ನ ಕೈಲಾದ ಸಹಾಯ ಮಾಡುತ್ತಿದ್ದಾರೆ. ಚೆನ್ನೈನ ಒಂದು ಕೊರೊನಾ ಟಾಸ್ಕ್ ಫೋರ್ಸ್ ಜೊತೆ ಸೇರಿಕೊಂಡಿರುವ ಶ್ರೀಯಾ, ಇನ್‍ಸ್ಟಾಗ್ರಾಮ್‍ನಲ್ಲಿ ಲೈವ್ ಬಂದು ನಾನು ಹೇಳಿದ ಸಂಸ್ಥೆಗೆ 200 ರೂ. ದೇಣಿಗೆ ನೀಡಿದರೆ ನನ್ನ ಜೊತೆ ಡ್ಯಾನ್ಸ್ ಮತ್ತು ಯೋಗ ಮಾಡುವ ಅವಕಾಶ ಪಡೆಯಬಹುದು ಎಂದು ಹೇಳಿಕೊಂಡಿದ್ದಾರೆ.

https://www.instagram.com/p/B_r5qsFl9tu/

ಈ ವಿಚಾರವಾಗಿ ಇನ್‍ಸ್ಟಾಗ್ರಾಮ್‍ನಲ್ಲಿ ತಾವು ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಕೂಡ ಅಪ್ಲೋಡ್ ಮಾಡಿರುವ ಶ್ರೀಯಾ, ನಾನು ಚೆನ್ನೈನ ಒಂದು ಸಂಸ್ಥೆಯ ಜೊತೆ ಕೊರೊನಾ ವಿರುದ್ಧ ಹೋರಾಡಲು ಟೈ ಆಫ್ ಮಾಡಿಕೊಂಡಿದ್ದೇನೆ. ಈ ಸಂಸ್ಥೆ ಲಾಕ್‍ಡೌನ್ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ, ಅನಾಥರಿಗೆ ಮತ್ತು ಅಂಗವಿಕಲರಿಗೆ ಸಹಾಯ ಮಾಡುತ್ತಿದೆ. ಹೀಗಾಗಿ ಈ ಸಂಸ್ಥೆಗೆ ನೀವು ಕೂಡ 200 ರೂ. ದೇಣಿಗೆ ನೀಡಿ. ನನ್ನ ಜೊತೆ ಡ್ಯಾನ್ಸ್ ಮತ್ತು ಯೋಗ ಮಾಡುವ ಅವಕಾಶ ಪಡೆಯಿರಿ. ಈ ಸ್ಪರ್ಧೆ ಶನಿವಾರದವರೆಗೂ ಇರುತ್ತದೆ. ಭಾನುವಾರ ವಿನ್ನರ್ ಯಾರು ಎಂದು ಘೋಷಣೆ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಶ್ರೀಯಾ ಶರಣ್ 2018ರ ಮಾರ್ಚ್ ತಿಂಗಳಲ್ಲಿ ವಿದೇಶಿಗರಾದ ಆಂಡ್ರೆ ಕೋಶಿವ್‍ನನ್ನು ಮದುವೆಯಾಗಿದ್ದರು. ಮದುವೆಯ ನಂತರ ಇಬ್ಬರೂ ಸ್ಪೇನ್‍ನಲ್ಲಿಯೇ ನೆಲೆಸಿದ್ದಾರೆ. ಆದರೆ ಇತ್ತೀಚೆಗೆ ಶ್ರೇಯಾ ಪತಿ ಆಂಡ್ರೆಗೆ ಕೊರೊನಾ ಲಕ್ಷಣ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗಿದ್ದರು. ಆದರೆ ವೈದ್ಯರು ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿ ಮನೆಗೆ ವಾಪಸ್ ಕಳುಹಿಸಿದ್ದರು. ಈ ಬಗ್ಗೆ ಸ್ವತಃ ಶ್ರೀಯಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.

ಆಂಡ್ರೆಗೆ ಒಣ ಕೆಮ್ಮು, ತಲೆ ನೋವು, ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಅವರನ್ನು ದಾಖಲಿಸಿಕೊಳ್ಳಲಿಲ್ಲ. ನಿಮಗೆ ಕೊರೊನಾ ಬಂದಿಲ್ಲವಾದರೂ ಆಸ್ಪತ್ರೆಗೆ ಬಂದರೆ ಕೊರೊನಾ ಬರುವ ಸಾಧ್ಯತೆ ಇದೆ. ಆದ್ದರಿಂದ ನೀವು ಆಸ್ಪತ್ರೆಗೆ ಬರುವುದು ಬೇಡ, ಮನೆಯಲ್ಲಿಯೇ ಕ್ವಾರಂಟೈನ್‍ನಲ್ಲಿ ಇರಿ ಎಂದು ಹೇಳಿ ಕಳುಹಿಸಿದ್ದರು ಎಂದು ತಿಳಿಸಿದ್ದರು. ಈಗ ಅವರು ಚೇತರಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *