ಮತ್ತೆ ಅಧಿಕಾರಕ್ಕೆ ಬರೋದು ಮರೆತುಬಿಡಿ: ತಮಿಳುನಾಡು ಸರ್ಕಾರದ ಮೇಲೆ ರಜನಿ ಗರಂ

Public TV
2 Min Read

ಚೆನ್ನೈ: ಮತ್ತೆ ಅಧಿಕಾರಕ್ಕೆ ಬರುವುದನ್ನು ಮರೆತುಬಿಡಿ ಎಂದು ನಟ ರಜನಿಕಾಂತ್ ಅವರು ತಮಿಳುನಾಡು ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.

ಕೊರೊನಾ ಸಮಯದಲ್ಲಿ ಮದ್ಯ ಮಾರಬಾರದು ಎಂದು ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೆ ಹೈಕೋರ್ಟಿನ ಈ ಅಜ್ಞೆಗೆ ತಡೆಯಾಜ್ಞೆ ನೀಡುವಂತೆ ತಮಿಳುನಾಡು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ. ಈ ವಿಚಾರಕ್ಕೆ ರಜನಿಕಾಂತ್ ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ರಜನಿಕಾಂತ್ ಅವರು, ಈ ಸಮಯದಲ್ಲಿ ರಾಜ್ಯ ಸರ್ಕಾರ ಮದ್ಯದಂಗಡಿಗಳನ್ನು ತೆರೆದರೆ ಮತ್ತೆ ಅವರು ಮುಂದಿನ ಬಾರಿ ಅಧಿಕಾರಕ್ಕೆ ಬರುವ ಕನಸನ್ನು ಮರೆತುಬಿಡಬೇಕು. ಈ ರೀತಿಯ ಕಠಿಣ ಪರಿಸ್ಥಿತಿಯಲ್ಲಿ ಮದ್ಯದಂಗಡಿಯನ್ನು ಓಪನ್ ಮಾಡುವುದರ ಬದಲು ಬೊಕ್ಕಸ ತುಂಬಿಸಲು ಬೇರೆ ಉತ್ತಮ ಮಾರ್ಗಗಳನ್ನು ದಯವಿಟ್ಟು ಹುಡುಕಿ ಎಂದು ಟ್ವೀಟ್ ಮಾಡಿದ್ದಾರೆ.

ಕೊರೊನಾ ಹಿಡಿತಕ್ಕೆ ಸಿಗದ ಸಮಯದಲ್ಲಿ ತಮಿಳುನಾಡಿ ಎಡಪ್ಪಾಡಿ ಕೆ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರ ಮದ್ಯದಂಗಡಿಗಳನ್ನು ಮತ್ತೆ ಓಪನ್ ಮಾಡಲು ತೀರ್ಮಾನಿಸಿತ್ತು. ಇದಕ್ಕೆ ಮದ್ರಾಸ್ ಹೈಕೋಟ್ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ರಜನಿಕಾಂತ್ ರೀತಿಯಲ್ಲೇ ನಟ ಕಮಲ್ ಹಾಸನ್ ಡಿಎಂಕೆಯ ಎಂಕೆ ಸ್ಟಾಲಿನ್ ಅವರು ಕೂಡ ವಿರೋಧ ವ್ಯಕ್ತಪಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ರಜನಿಕಾಂತ್ ಟ್ವೀಟ್ ಮಾಡುತ್ತಿದ್ದಂತೆ ತಮ್ಮ ನೆಚ್ಚಿನ ನಟನ ಪರವಾಗಿ ನಿಂತಿರುವ ಥಲೈವಾ ಫ್ಯಾನ್ಸ್, ರಜನಿಕಾಂತ್ ಅವರದ್ದು ನೇರಮಾತು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಜೊತಗೆ ಇನ್ನೂ ಕೆಲವರು ರಜನಿ ಅವರು ಜನರ ಮನಸ್ಸುನ್ನು ಅರ್ಥಮಾಡಿಕೊಂಡ ಅದರ ಪರವಾಗಿ ಮಾತನಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಮದ್ರಾಸ್ ಹೈಕೋರ್ಟ್, ಮದ್ಯದಂಗಡಿಗಳ ಮುಂದೆ ಸರಿಯಾದ ಸಾಮಾಜಿಕ ಅಂತರ ಕಾಯ್ದು ಕೊಳ್ಳುತ್ತಿಲ್ಲ. ಜೊತೆಗೆ ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ಹೀಗೆ ಮುಂದುವರೆದರೆ ಅಪಾಯಕ್ಕೆ ಎಡೆಮಾಡಿಕೊಡುತ್ತದೆ ಎಂದು ಹೇಳಿ ಮದ್ಯದಂಗಡಿಗಳನ್ನು ಮುಚ್ಚುವಂತೆ ಸೂಚಿಸಿತ್ತು. ಇದಾದ ನಂತರ ಶನಿವಾರ ತಮಿಳುನಾಡು ರಾಜ್ಯ ಸರ್ಕಾರ ಹೈಕೋರ್ಟಿನ ಅಜ್ಞೆಯನ್ನ ತಡೆ ಹಿಡಿಯುವಂತೆ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು.

ಕೊರೊನಾದಿಂದ ದೇಶ ಲಾಕ್‍ಡೌನ್ ಆದ ಬಳಿಕ ಮಾರ್ಚ್ 25ರಿಂದ ಮದ್ಯದಂಗಡಿಗಳನ್ನು ಮುಚ್ಚಲಾಗಿತ್ತು. ಆದರೆ ಮೇ 4ರಂದು ಸ್ವಲ್ಪ ಪ್ರಮಾಣದಲ್ಲಿ ಲಾಕ್‍ಡೌನ್ ಅನ್ನು ಸಡಿಲಿಕೆ ಮಾಡಿದ ಕಾರಣ ಕೆಲ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಆದರೆ ಕೆಲ ಷರತ್ತುಗಳನ್ನು ವಿಧಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿತ್ತು. ಆದರೆ ಕೆಲ ಕಡೆ ಈ ನಿಯಮಗಳು ಪಾಲನೆ ಆಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *