ಸಿಎಂ ಆಗಿ ಉಳಿಬೇಕಾದ್ರೆ ಕುಮಾರಸ್ವಾಮಿ ತಮ್ಮೆಲ್ಲಾ ಚೇಷ್ಟೆ ಬಿಡಬೇಕು: ಚಲುವರಾಯಸ್ವಾಮಿ

Public TV
2 Min Read

ಮಂಡ್ಯ: ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಹೋಗುವುದು ಸಿಎಂ ಕುಮಾರಸ್ವಾಮಿ ಅವರ ಕೈಯಲ್ಲಿದೆ. ಮುಂದಿನ ದಿನಗಳಲ್ಲಿ ಅಂದ್ರೆ ಐದು ವರ್ಷ ಸಿಎಂ ಆಗಿ ಉಳಿಯಬೇಕಾದರೆ ಕುಮಾರಸ್ವಾಮಿ ತಮ್ಮ ಚೇಷ್ಟೆಗಳನ್ನು ಬಿಡಬೇಕೆಂದು ಮಾಜಿ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಹಲವು ಶಾಸಕರು, ಮುಖಂಡರು, ಜೆಡಿಎಸ್ ರಾಜ್ಯಾಧ್ಯಕ್ಷರು ಮಾತನಾಡಿದ್ದಾರೆ. ಎಲ್ಲರೂ ನಾಳೆಯೇ ಕುಮಾರಸ್ವಾಮಿ ಅವರನ್ನು ಬದಲಿಸಿ ಸಿದ್ದರಾಮಯ್ಯರನ್ನ ಸಿಎಂ ಮಾಡಿ ಎಂದು ಹೇಳಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ವರ್ಗದವರನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡುವಂತಹ ಮುಖ್ಯಮಂತ್ರಿ ನಮಗೆ ಬೇಕೆಂದು ಹೇಳಿದ್ದಾರೆ.

37 ಸೀಟ್ ಪಡೆದು ಮುಖ್ಯಮಂತ್ರಿಯಾದವರು 80 ಸೀಟ್ ಗೆದ್ದಿರುವ ರಾಷ್ಟ್ರೀಯ ಪಕ್ಷಕ್ಕೆ ಸೂಚನೆ ನೀಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಸೂಚಿಸುತ್ತಿದ್ದಾರೆ. ಸಿಎಂ ಯಾವತ್ತೂ ತಮ್ಮ ನಡವಳಿಕೆಯನ್ನು ಬದಲಾವಣೆ ಮಾಡಿಕೊಳ್ಳಲು ಹೋಗದೇ ಕೇವಲ ಬೇರೆಯವರಿಗೆ ಸೂಚನೆ ನೀಡುತ್ತಾ ಬರುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಕಿಡಿಕಾರಿದರು.

ಮನ್‍ಮುಲ್(ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ) ಹೊರತುಪಡಿಸಿ ರಾಜ್ಯದ ಎಲ್ಲ ಕಡೆಯೂ ಹಾಲು ಉತ್ಪಾದಕರ ಸಂಘದ ಚುನಾವಣೆಗಳು ನಡೆಯುತ್ತಿವೆ. ಮಂಡ್ಯದಲ್ಲಿ ಚುನಾವಣೆ ನಡೆಯಬಾರದು ಎಂಬ ಉದ್ದೇಶದಿಂದ ಮೈತ್ರಿ ಸರ್ಕಾರ ಆಡಳಿತಾತ್ಮಕ ಕಾರಣಗಳನ್ನು ನೀಡಿ ಎಲೆಕ್ಷನ್ ಮುಂದೂಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದೆ. ಮೈತ್ರಿ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಮನ್‍ಮುಲ್ ಚುನಾವಣೆ ನಡೆಸಲಿ. ಚುನಾವಣೆ ನಡೆಸದೇ ಇದ್ದರೆ ಜನರು ಉಪವಾಸ ಬೀಳಲ್ಲ. ಮಂಡ್ಯ ಮನ್‍ಮುಲ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ನಿರ್ದೇಶಕರಿದ್ದಾರೆ ಎಂದು ಚುನಾವಣೆ ನಡೆಸಲು ಹಿಂದೇಟು ಹಾಕಲಾಗುತ್ತಿದೆ. ಸಿಎಂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಆರೋಪಿಸಿದರು.

ತುಮಕೂರಿನಲ್ಲಿ ಅಪೆಕ್ಸ್ ಬ್ಯಾಂಕ್‍ನ ವಿಚಾರಣೆ ನಡೆಸುತ್ತಿದ್ದಾರೆ. ಕೆ.ಎನ್.ರಾಜಣ್ಣ ಮಾತಿನಲ್ಲಿ ಒರಟನಾದ್ರೂ ಯಾವುದೇ ಅವ್ಯವಹಾರವಿಲ್ಲದೇ ಬ್ಯಾಂಕ್ ಆಡಳಿತವನ್ನು ಅತ್ಯಂತ ಅಚ್ಚುಕಟ್ಟುತನದಿಂದ ನಡೆಸಿಕೊಂಡು ಹೋಗುತ್ತಿದ್ದಾರೆ. ರಾಜಣ್ಣ ಚುನಾವಣೆಯಲ್ಲಿ ಸಿಎಂ ಹೇಳಿದ ಹಾಗೆ ಕೇಳಿಲ್ಲ ಎಂಬ ಕಾರಣಕ್ಕೆ ವಿಚಾರಣೆ ನಡೆಸೋದು ಅನಾವಶ್ಯಕ. ಈ ಹಿಂದೆ ಬ್ಯಾಂಕ್‍ನಲ್ಲಿ ತಿಂದು ತೇಗಿ ಹೋಗಿ ಶಿವಮೊಗ್ಗದ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿರುವ ಮಂಜುನಾಥ್ ಹೆಸರು ಹೊರ ಬರಲಿದೆ. ಆದ್ರೆ ಕೋ ಆಪರೇಟಿವ್ ಅಧಿಕಾರಿಗಳು ಅವ್ವನ್ನ ಅಪ್ಪನ್ನ ಮಾಡ್ತಾರೆ. ಅಪ್ಪನನ್ನು ಅಮ್ಮ ಎಂದು ಸಾಬೀತು ಮಾಡುವ ಕಲೆಯನ್ನು ಹೊಂದಿದ್ದಾರೆ ಎಂದು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *