ಮತ್ತೆ 3 ಮರಿಗಳಿಗೆ ಜನ್ಮ ನೀಡಿದ ʻಗಾಮಿನಿʼ – ಕುನೋದಲ್ಲಿ ಚೀತಾಗಳ ಸಂಖ್ಯೆ 38ಕ್ಕೆ ಏರಿಕೆ

2 Min Read

– 2 ವರ್ಷಗಳಲ್ಲಿ 8 ಮರಿಗಳಿಗೆ ಜನ್ಮ ನೀಡಿದ ಚೀತಾ

ಭೋಪಾಲ್‌: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) 2 ವರ್ಷಗಳ ಹಿಂದೆ 5 ಮರಿಗಳಿಗೆ ಜನ್ಮ ನೀಡಿದ್ದ ʻಗಾಮಿನಿʼ ಚೀತಾ (Cheetah) ಇದೀಗ ಮತ್ತೆ ಮೂರು ಮರಿಗಳಿಗೆ ಜನ್ಮ ನೀಡಿದೆ. ಇದರೊಂದಿಗೆ ಒಟ್ಟು ಚೀತಾಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಚೀತಾ ಮರುಪರಿಚಯ ಕಾರ್ಯಕ್ರಮದಲ್ಲಿ ʻಗಾಮಿನಿʼ (Cheetah Gamini) ಚೀತಾವನ್ನ 2022 ರಲ್ಲಿ ದಕ್ಷಿಣ ಆಫ್ರಿಕಾದಿಂದ ಆಮದು ಮಾಡಿಕೊಳ್ಳಲಾಗಿತ್ತು. ಆಗ ಗಾಮಿನಿಗೆ 5 ವರ್ಷ ವಯಸ್ಸಾಗಿತ್ತು. 2 ವರ್ಷಗಳ ಹಿಂದೆ 5 ಮರಿಗಳಿಗೆ ಜನ್ಮ ನೀಡಿದ್ದ ಗಾಮಿನಿ ಇದೀಗ ಮತ್ತೆ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಒಟ್ಟು ಸಂಖ್ಯೆ 38ಕ್ಕೆ ಹೆಚ್ಚಳವಾಗಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬೆಳವಣಿಗೆಯು ಭಾರತದ ಯಶಸ್ಸು ಮತ್ತು ದೃಢನಿಶ್ಚಯದ ಸಂರಕ್ಷಣಾ ಪ್ರಯತ್ನಗಳ ಪ್ರಬಲ ಸಂಕೇತ. ಆಮದು ಮಾಡಿಕೊಂಡ ಬಳಿಕ ಭಾರತದಲ್ಲಿ ಜನಿಸಿದ ಚೀತಾಗಳ ಸಂಖ್ಯೆ ಒಟ್ಟು 27ಕ್ಕೆ ತಲುಪಿದ್ದು, ಒಟ್ಟು ಸಂಖ್ಯೆ 38 ಆಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಭಾರತೀಯ ಮೂಲದ ಚೀತಾ

1952 ರಲ್ಲಿ ಭಾರತದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಗಿತ್ತು. ಆ ನಂತರ ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನ (Wildlife) ಸಂರಕ್ಷಣೆ ಮಾಡುವ ಯೋಜನೆಯಡಿ ನಮೀಬಿಯಾದಿಂದ (Namibia) ಭಾರತಕ್ಕೆ 3 ಗಂಡು ಹಾಗೂ 5 ಹೆಣ್ಣು ಚೀತಾಗಳನ್ನ ವಿಶೇಷ ವಿಮಾನದಲ್ಲಿ ತರಲಾಗಿತ್ತು. ಚೀತಾಗಳನ್ನು ಎರಡು ಬ್ಯಾಚ್‌ಗಳಲ್ಲಿ ಆಮದು ಮಾಡಿಕೊಳ್ಳಲಾಯಿತು. 2022 ರಲ್ಲಿ ನಮೀಬಿಯಾದಿಂದ ಮೊದಲ ಬ್ಯಾಚ್‌ ಅನ್ನು ಆಮದು ಮಾಡಿಕೊಳ್ಳಲಾಗಿತ್ತು. ಸೆ.17 ರಂದು ಪ್ರಧಾನಿ ಮೋದಿ (Narendra Modi) ಈ ಚೀತಾಗಳನ್ನು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡುಗಡೆ ಮಾಡಿದ್ದರು.

ಆರಂಭದ ಒಂದು ವರ್ಷದ ಅವಧಿಯಲ್ಲಿ ಸುಮಾರು 10 ಚೀತಾಗಳು ಸಾವಿಗೀಡಾಗಿದ್ದವು. ಆ ನಂತರ ಚೀತಾಗಳ ಸಂತತಿಯಲ್ಲಿ ಗಣನೀಯ ಏರಿಕೆ ಕಂಡಿದೆ. 2 ವರ್ಷಗಳಲ್ಲಿ ಗಾಮಿನಿ ಚೀತಾ 8 ಮರಿಗಳಿಗೆ ಜನ್ಮ ನೀಡಿದೆ. ಕಳೆದ ವರ್ಷ ಭಾರತೀಯ ಮೂಲದ ಚೀತಾ ಮುಖಿ 5 ಮರಿಗಳಿಗೆ ಜನ್ಮ ನೀಡಿದ್ದು ವಿಶೇಷ. ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಗಾಯಗೊಂಡಿದ್ದ ಹೆಣ್ಣು ಚೀತಾ ಸಾವು

Share This Article