ಒಂದೇ ಕಾರ್ಯಕ್ರಮಕ್ಕೆ ಪ್ರತ್ಯೇಕ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಅಶ್ವಥ್ ನಾರಾಯಣ, ಶ್ರೀರಾಮುಲು

Public TV
1 Min Read

ಹಾಸನ: ಒಂದೇ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ಚನ್ನರಾಯಪಟ್ಟಣಕ್ಕೆ ಪ್ರತ್ಯೇಕ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮತ್ತು ಸಚಿವ ಶ್ರೀರಾಮುಲು ಎಲ್ಲ ವಿವಾದಕ್ಕೆ ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ.

ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ನಾಗರತ್ನಮ್ಮ ಮತ್ತು ಶೇಖರ್ ದಂಪತಿ ನೂತನವಾಗಿ ಲಕ್ಷ್ಮಿ ನಾರಾಯಣ ಪೆಟ್ರೋಲ್ ಬಂಕ್ ಆರಂಭಿಸಿದ್ದು ಅದರ ಉದ್ಘಾಟನೆಗೆ ಅಶ್ವಥ್ ನಾರಾಯಣ್ ಮತ್ತು ಶ್ರೀರಾಮುಲು ಪ್ರತ್ಯೇಕ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ನಾಯಕರಿಬ್ಬರೂ ಸಚಿವ ಸಂಪುಟ ವಿಸ್ತರಣೆ ವಿಷಯವಾಗಿ ಮುನಿಸಿಕೊಂಡಿದ್ದಾರೆ. ಹೀಗಾಗಿ ಸರ್ಕಾರದ ಹಣದಲ್ಲಿ ಪ್ರತ್ಯೇಕ ಹೆಲಿಕಾಪ್ಟರ್‍ನಲ್ಲಿ ಆಗಮಿಸಿ ದುಂದುವೆಚ್ಚ ಮಾಡುತ್ತಿದ್ದಾರೆ ಎಂದು ತಮ್ಮತಮ್ಮಲ್ಲೇ ಟೀಕೆ ಮಾಡಲಾರಂಭಿಸಿದ್ದರು.

ಸಾರ್ವಜನಿಕರ ಟೀಕೆಗಳಿಗೆ ಕಾರ್ಯಕ್ರಮದ ವೇದಿಕೆಯಲ್ಲೇ ಸ್ಪಷ್ಟನೆ ನೀಡಿದ ನಾಯಕರಿಬ್ಬರು, ನಾವು ಒಂದೇ ಹೆಲಿಕಾಪ್ಟರ್‌ನಲ್ಲಿಯೇ ಬರುತ್ತೇವೆ ಎಂದು ಹೇಳಿದರೂ ಬಂಕ್ ಮಾಲೀಕರಾದ ನಾಗರತ್ನಮ್ಮ ಪ್ರತ್ಯೇಕ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಕೊಟ್ಟರು. ಇಲ್ಲದಿದ್ದರೆ ನಾವು ಕಾರ್‍ನಲ್ಲಿಯೇ ಬರುತ್ತಿದ್ದೆವು. ಚನ್ನರಾಯಪಟ್ಟಣದವರು ತಾವೇನು ಕಮ್ಮಿಯಿಲ್ಲ ಎಂಬಂತೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದರು. ಅದೇ ಹಣವನ್ನು ನಮಗೆ ಕೊಟ್ಟಿದ್ದರೆ ಬಡವರಿಗೆ ಸಹಾಯ ಮಾಡಬಹುದಿತ್ತು ಎಂದು ಹೇಳುವ ಮೂಲಕ ಪ್ರತ್ಯೇಕ ಹೆಲಿಕಾಪ್ಟರ್ ವಿವಾದಕ್ಕೆ ತೆರೆ ಎಳೆದರು.

Share This Article
Leave a Comment

Leave a Reply

Your email address will not be published. Required fields are marked *