ಪಂದ್ಯಕ್ಕೆ ಮಳೆ ಅಡ್ಡಿ| ಆಸ್ಟ್ರೇಲಿಯಾ ಸೆಮಿಗೆ ಹೋದ್ರೂ ಅಫ್ಘಾನ್‌ಗೆ ಇನ್ನೂ ಇದೆ ಚಾನ್ಸ್‌!

Public TV
2 Min Read

ಲಾಹೋರ್‌: ಚಾಂಪಿಯನ್ಸ್‌ ಟ್ರೋಫಿ (Champions Trophy) ಲೀಗ್‌ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಆಸ್ಟ್ರೇಲಿಯಾ (Australia) ಸೆಮಿಫೈನಲ್‌ ಪ್ರವೇಶಿಸಿದೆ. ಅಫ್ಘಾನಿಸ್ತಾನದ (Afghanistan) ಸೆಮಿ ಭವಿಷ್ಯ ಇಂಗ್ಲೆಂಡ್‌ (England) ಕೈಯಲ್ಲಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 273 ರನ್‌ಗಳಿಗೆ ಆಲೌಟ್‌ ಆಯ್ತು. ನಂತರ ಆಸ್ಟ್ರೇಲಿಯಾ ಬ್ಯಾಟ್‌ ಮಾಡುವ ವೇಳೆ ಜೋರಾಗಿ ಮಳೆ ಸುರಿಯಲು ಆರಂಭಿಸಿತ್ತು. ಮಳೆಯಿಂದ ಪಂದ್ಯ ಸ್ಥಗಿತಗೊಂಡಾಗ ಆಸ್ಟ್ರೇಲಿಯಾ 12.5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 109 ರನ್‌ ಗಳಿಸಿತ್ತು.

 

ನಿರಂತರ ಮಳೆ (Rain) ಸುರಿದ ಹಿನ್ನೆಲೆಯಲ್ಲಿ ಕೊನೆಗೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಅಂತಿಮವಾಗಿ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಯಿತು.

ಸದ್ಯ ಈಗ ಬಿ ಗ್ರೂಪ್‌ನಲ್ಲಿ ಆಸ್ಟ್ರೇಲಿಯಾ 4 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾ 3 ಅಂಕದೊಂದಿಗೆ ಎರಡನೇ ಸ್ಥಾನ 3 ಅಂಕ ಪಡೆದಿರುವ ಅಫ್ಘಾನಿಸ್ತಾನ ಮೂರನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿದ್ದರೂ ಅಫ್ಘಾನಿಸ್ತಾನ ಸೆಮಿಗೆ ಹೋಗುವ ಅವಕಾಶ ಈಗಲೂ ಇದೆ.

ಸೆಮಿ ಅವಕಾಶ ಹೇಗೆ?
ಸದ್ಯ ಈಗ ದಕ್ಷಿಣ ಆಫ್ರಿಕಾ (South Africa) 2.140 ರನ್‌ ರೇಟ್‌ ಹೊಂದಿದ್ದರೆ ಅಫ್ಘಾನಿಸ್ತಾನ -0.990 ರನ್‌ ರೇಟ್‌ ಹೊಂದಿದೆ. ಮಾರ್ಚ್‌ 1 ಶನಿವಾರ ಕರಾಚಿಯಲ್ಲಿ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಪಂದ್ಯ ನಡೆಯಲಿದೆ.

ಈ ಪಂದ್ಯದಲ್ಲಿ ಇಂಗ್ಲೆಂಡ್‌ ಜಯಗಳಿಸುವುದು ಮಾತ್ರವಲ್ಲ ಭಾರೀ ಅಂತರದಿಂದ ಗೆಲ್ಲಬೇಕಾಗುತ್ತದೆ. ಒಂದು ವೇಳೆ ಮೊದಲು ಬ್ಯಾಟ್‌ ಮಾಡಿದರೆ ಇಂಗ್ಲೆಂಡ್‌ ಕನಿಷ್ಟ 207 ರನ್‌ಗಳ ಅಂತರದಿಂದ ಜಯಗಳಿಸಬೇಕಾಗುತ್ತದೆ. ಒಂದು ವೇಳೆ ಚೇಸಿಂಗ್‌ ಮಾಡಿದರೆ ಇಂಗ್ಲೆಂಡ್‌ ಗುರಿಯನ್ನು 11.1 ಓವರ್‌ಗಳಲ್ಲಿ ಹೊಡೆಯಬೇಕಾಗುತ್ತದೆ.

ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ ಆಫ್ರಿಕಾಗೆ 1 ಅಂಕ ಸಿಗುತ್ತದೆ. ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ಕಾರಣ ಅಫ್ರಿಕಾ 4 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಏರುತ್ತದೆ. ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್‌ ಮಧ್ಯೆ ಕೊನೆಯ ಲೀಗ್‌ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಸೋತವರ ಜೊತೆ ಸೆಮಿಫೈನಲ್‌ ಆಡಲಿದೆ.

 

Share This Article