ಸಮುದಾಯದವರಿಂದ ಕುಟುಂಬಕ್ಕೆ ಬಹಿಷ್ಕಾರ- ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಯತ್ನ

Public TV
1 Min Read

ಚಾಮರಾಜನಗರ: ದಲಿತರಿಗೆ ಸವರ್ಣೀಯರು ಬಹಿಷ್ಕಾರ ಹಾಕುವ ಅಮಾನವೀಯ ಘಟನೆಗಳು ಅಲ್ಲಲ್ಲಿ ನಡೆಯುವ ವರದಿಗಳನ್ನು ಗಮನಿಸಿದ್ದೇವೆ. ಆದರೆ ಚಾಮರಾಜನಗರದ ಗ್ರಾಮವೊಂದರಲ್ಲಿ ದಲಿತರೇ ದಲಿತ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ತಾಲೂಕಿನ ಅಮಚವಾಡಿಯಲ್ಲಿ ಘಟನೆ ನಡೆದಿದ್ದು, ಬಹಿಷ್ಕಾರಕ್ಕೆ ಒಳಗಾದ ಕುಟುಂಬದ ವ್ಯಕ್ತಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಮಚವಾಡಿ ಗ್ರಾಮದ ಪುಟ್ಟಯ್ಯ ಅಲಿಯಾಸ್ ಗಾರೆ ಪುಟ್ಟಯ್ಯ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಅಂಬೇಡ್ಕರ್ ಜಯಂತಿಗಾಗಿ ಪ್ರತಿ ಮನೆಯಿಂದ 200 ರೂ. ಚಂದಾ ನೀಡಬೇಕು ಎಂದು ನಿಗದಿಪಡಿಸಲಾಗಿತ್ತು. ಆದರೆ ಪುಟ್ಟಯ್ಯನ ಬಳಿ ಹಣವಿಲ್ಲದ ಕಾರಣ ಚಂದಾ ನೀಡುವುದು ಒಂದು ದಿನ ತಡವಾಗಿತ್ತು. ಮಾರನೇ ದಿನ ಚಂದಾ ನೀಡಲು ಹೋದ ಪುಟ್ಟಯ್ಯನಿಗೆ ಬೀದಿಯ ಸಮುದಾಯದ ಮುಖಂಡರು ಚಂದಾ ನೀಡುವುದು ತಡವಾಗಿದ್ದರಿಂದ 5 ಸಾವಿರ ದಂಡ ವಿಧಿಸಿ, ಚಂದಾ ಹಾಗೂ ದಂಡದ ಹಣವನ್ನು ಒಟ್ಟಿಗೆ ನೀಡುವಂತೆ ತಾಕೀತು ಮಾಡಿದ್ದರು.

ಕೂಲಿ ಕೆಲಸ ಮಾಡಿಕೊಂಡಿದ್ದ ಪುಟ್ಟಯ್ಯ ಅಷ್ಟೊಂದು ಹಣವನ್ನು ಹೊಂದಿಸುವುದು ಕಷ್ಟವಾಗಿ ದಂಡ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದೇ ಕಾರಣವನ್ನಿಟ್ಟುಕೊಂಡು ಪುಟ್ಟಯ್ಯ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿತ್ತು. ಮನನೊಂದ ಪುಟ್ಟಯ್ಯ ಮಂಡ್ಯ ಜಿಲ್ಲೆ ಮಳವಳ್ಳಿಗೆ ಹೋಗಿ ಅಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದ ಪುಟ್ಟಯ್ಯ ಮನೆಯಲ್ಲಿ ಪಕ್ಕದ ಚೆನ್ನಪ್ಪನಪುರ ಗ್ರಾಮದ ದೇವರಗುಡ್ಡರನ್ನು ಕರೆಸಿ ಕಂಡಾಯ ಪೂಜೆ ಮಾಡಿಸಿದ್ದರು. ವಿಷಯ ತಿಳಿದ ಬೀದಿಯ ಸಮುದಾಯದ ಮುಖಂಡರು ದೇವರಗುಡ್ಡರನ್ನು ಕಂಡಾಯ ಸಮೇತ ವಾಪಸ್ ಕಳಿಸಿದ್ದರು. ಇದರಿಂದ ಮನೆಯಲ್ಲಿ ಮಾಡಿದ್ದ ಅಡುಗೆ ಎಲ್ಲವೂ ವ್ಯರ್ಥವಾಗಿತ್ತು.

ಪರಿಣಾಮ ಪುಟ್ಟಯ್ಯ ನಿನ್ನೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ್ದರಿಂದ ಕುಪಿತಗೊಂಡ ಸಮುದಾಯದ ಮುಖಂಡರು ನಿನ್ನೆ ರಾತ್ರಿ ಪುಟ್ಟಯ್ಯನ ಮನೆ ಬಳಿ ಬಂದು ಹೀನಾಮಾನವಾಗಿ ಬೈಯ್ದು ಮಾನಸಿಕವಾಗಿ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ಎಲ್ಲಾ ಘಟನೆಗಳಿಂದ ಬೇಸತ್ತ ಪುಟ್ಟಯ್ಯ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *