ವನ್ಯ ಜೀವಿ ಪ್ರಿಯರ ಆಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ – ಶಾರ್ಪ್ ಶೂಟರ್ಸ್ ವಾಪಸ್

Public TV
1 Min Read

ಚಾಮರಾಜನಗರ: ವನ್ಯ ಜೀವಿ ಪ್ರಿಯರ ಆಕ್ರೋಶಕ್ಕೆ ಮಣಿದ ಅರಣ್ಯ ಇಲಾಖೆ ಹುಲಿ ಕಾರ್ಯಾಚರಣೆಗೆ ಬಂದಿದ್ದ ಶಾರ್ಪ್ ಶೂಟರ್ಸ್ ಅನ್ನು ವಾಪಸ್ ಕಳುಹಿಸಿದೆ.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿಯನ್ನು ಸೇರಿ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದ್ದು, ಹುಲಿ ಶೂಟೌಟ್‍ಗೆ ಎಪಿಸಿಸಿಎಫ್ ಅಧಿಕಾರಿ ಜಗತ್ ರಾಂ ಆದೇಶ ಹೊರಡಿಸಿದ್ದರು. ಈ ಆದೇಶ ಹೊರಬೀಳುತ್ತಿದ್ದಂತೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಈಗ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಮಣಿದಿರುವ ಅರಣ್ಯ ಇಲಾಖೆ, ಶೂಟೌಟ್ ಅನ್ನು ಕೈಬಿಟ್ಟು, ಹುಲಿಯನ್ನು ಸೆರೆಹಿಡಿಯುವ ಕೆಲಸಕ್ಕೆ ಮುಂದಾಗಿದೆ. ಅದ್ದರಿಂದ ಹುಲಿ ಶೂಟೌಟ್ ಗೆ ಬಂದಿದ್ದ ಹೈದರಾಬಾದ್‍ನ ಶಾರ್ಪ್ ಶೂಟರ್ಸ್ ಅಸ್ಗರ್ ಅಲಿ ಮತ್ತು ಶಫತ್ ಅಲಿ ಖಾನ್ ಅವರನ್ನು ವಾಪಸ್ ಕಳುಹಿಸಲಾಗಿದೆ. ಇವರು 2019 ರಲ್ಲಿ ಮಹಾರಾಷ್ಟ್ರದಲ್ಲಿ 15 ಜನರನ್ನ ಬಲಿ ಪಡೆದಿದ್ದ ಅವನಿ ಹುಲಿ ಭೇಟೆಯಾಡಿದ್ದರು.

ಹುಲಿಯನ್ನು ಶೂಟ್ ಮಾಡಬಾರದು. ಬದಲಿಗೆ ಅದನ್ನು ಸೆರೆಹಿಡಿಯಬೇಕು ಎಂದು ಪ್ರಾಣಿ ಪ್ರಿಯರು ಆಗ್ರಹ ಮಾಡಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಕೂಡ ಚರ್ಚೆಯಾಗಿತ್ತು. ಇದರಿಂದ ಎಚ್ಚೆತ್ತಾ ಬೆಂಗಳೂರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಹುಲಿಯನ್ನು ಶೂಟ್ ಮಾಡದೇ ಸೆರೆಹಿಡಿಯುವಂತೆ ಸೂಚನೆ ನೀಡಿದ್ದಾರೆ.

ಹುಲಿ ಸೆರೆಗೆ ಎರಡನೇ ದಿನವು ಕಾರ್ಯಾಚರಣೆ ಮುಂದುವರಿದಿದ್ದು, ಹುಲಿಯ ಚಲನವಲನ ಪತ್ತೆಗೆ ಬಂಡೀಪುರ, ಕೆಬ್ಬೇಪುರ, ಮಕ್ಕಳಮಲ್ಲಪ್ಪ ದೇವಸ್ಥಾನದ ಸುತ್ತಮುತ್ತ ಅರಣ್ಯದಲ್ಲಿ 224 ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಇದರ ಜೊತೆಗೆ ಇಂದು ಕಾರ್ಯಾಚರಣೆ ಮತ್ತಷ್ಟು ತೀವ್ರಗೊಳಿಸಲು ಅರಣ್ಯ ಇಲಾಖೆ ತೀರ್ಮಾನ ಮಾಡಿದ್ದು, ಅಭಿಮನ್ಯು, ಜಯಪ್ರಕಾಶ್, ಗೋಪಾಲಸ್ವಾಮಿ, ರೋಹಿತ್, ಪಾರ್ಥಸಾರಥಿ, ಗಣೇಶ ಸಾಕಾನೆಗಳೊಂದಿಗೆ ಕಾರ್ಯಾಚರಣೆ ಮಾಡುತ್ತಿದ್ದಾರೆ. ಹುಲಿ ಪತ್ತೆಗೆ ಡ್ರೋನ್ ಕ್ಯಾಮೆರಾವನ್ನು ಬಳಕೆ ಮಾಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *