ನೆರೆ ಪರಿಹಾರ ತರದ್ದು, ಸಿಎಂ ಅಸಹಾಯಕತೆ ತೋರಿಸುತ್ತಿದೆ: ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್

Public TV
2 Min Read

– ಪ್ರಧಾನಿ ಬಳಿಗೆ ಸಿಎಂ ಸರ್ವಪಕ್ಷ ನಿಯೋಗ ಕರೆದೊಯ್ಯಬೇಕಿತ್ತು
– ನೆರೆ ಪರಿಹಾರ ವಿಚಾರದಲ್ಲಿ ನಾವು ಸಂಪೂರ್ಣ ಸೋತಿದ್ದೇವೆ

ಚಾಮರಾಜನಗರ: ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗದಿರುವುದು ಸಿಎಂ ಯಡಿಯೂರಪ್ಪ ಅಸಹಾಯಕತೆ ತೋರಿಸುತ್ತಿದೆ ಎಂದು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಬಳಿಗೆ ಸಿಎಂ ಸರ್ವಪಕ್ಷ ನಿಯೋಗ ಕರೆದೊಯ್ಯಬೇಕಿತ್ತು. ಸಂಸತ್ ಸದಸ್ಯರನ್ನು ಕರೆದು ಸಭೆ ಮಾಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನೆರೆ ಪರಿಹಾರದ ಬಗ್ಗೆ ಯಾರೂ ಸರಿಯಾದ ಆಸಕ್ತಿ ವಹಿಸುತ್ತಿಲ್ಲ. ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ. ನಾಳೆ, ನಾಡಿದ್ದು ಎಂದು ದಿನಕ್ಕೊಂದು ಸಬೂಬು ಕೊಡುತ್ತಿದ್ದಾರೆ. ಜನರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಕೇಂದ್ರದ ಮೇಲೆ ಒತ್ತಡ ತಂದು ಪರಿಹಾರ ಬಿಡುಗಡೆ ಮಾಡಿಸಬೇಕಿತ್ತು. ನೆರೆ ಪರಿಹಾರ ವಿಚಾರದಲ್ಲಿ ನಾವು ಸಂಪೂರ್ಣ ಸೋತಿದ್ದೇವೆ. ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ನಿಂದ ಹಣ ಬಿಡುಗಡೆಗೊಳಿಸಬೇಕಿತ್ತು. ಪಕ್ಷದ ಶಿಸ್ತಿನ ಹೆಸರಿನಲ್ಲಿ ಎಲ್ಲಾ ಮುಚ್ಚಿಡೋದು ಸರಿಯಲ್ಲ. ಎಲ್ಲವನ್ನೂ ನಾವೂ ಸರಿಪಡಿಸಿಕೊಳ್ಳೋಣ ಎಂಬುದು ಸರಿಯಲ್ಲ ಎಂದು ತಮ್ಮ ಪಕ್ಷದ ಮೇಲೆ ಅಸಮಾಧಾನ ವ್ಯಕ್ತ ಪಡಿಸಿದರು.

ಇದೇ ವೇಳೆ ಸಿಎಂ ರಾಜ್ಯದ ಬೊಕ್ಕಸ ಖಾಲಿ ವಿಚಾರವಾಗಿ ಮಾತನಾಡಿದ ಅವರು, ನೆರೆ ಪರಿಹಾರಕ್ಕೆ ರಾಜ್ಯದಲ್ಲಿ 38 ಸಾವಿರ ಕೋಟಿ ಎಲ್ಲಿ ಬರುತ್ತೆ. ಕೇಂದ್ರದ ನೆರವು ಬರಬೇಕು. ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ನಿಂದ ಮೂರು ಸಾವಿರದ ಐವತ್ತು ಕೋಟಿ ಬರಬೇಕು. ಆದರೆ ಒಂದು ಬಿಡಿಗಾಸು ಬಂದಿಲ್ಲ. ರಾಜ್ಯದ ಕಂದಾಯ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರಾ? ಕೃಷಿ ಸಚಿವರು ಯಾರು? ನೀವೆಲ್ಲಾ ಹೋಗಿ ಒತ್ತಾಯ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದರು.

ರಾಜ್ಯ ಹಾಗೂ ಕೇಂದ್ರದ ವರದಿಗಳಲ್ಲಿ ವ್ಯತ್ಯಾಸ ಏನೇ ಇರಲಿ ಮೊದಲು ಹಣ ಬಿಡುಗಡೆ ಮಾಡಲಿ. ಕೇಂದ್ರದ ಗೃಹ ಸಚಿವರು, ಹಣಕಾಸು ಸಚಿವರು ಅಧಿಕಾರಿಗಳನ್ನು ಕರೆದು ಹೇಳೋಕ್ಕಾಗಲ್ಲ. ರಾಜ್ಯದಲ್ಲಿ ಆಡಳಿತವಿದ್ಯಾ? ಏನ್ ಆಗ್ತಿದೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಜನರ ಹಿತದೃಷ್ಟಿಯಿಂದ ನಿರ್ದಾಕ್ಷಿಣ್ಯವಾಗಿ ಹೇಳಲೇ ಬೇಕಾಗತ್ತದೆ. 25 ಜನ ಎಂಪಿಗಳನ್ನು ಯಾರೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಒಂದು ಸಭೆ ಕೂಡ ಕರೆದಿಲ್ಲ. ಮುಖ್ಯಮಂತ್ರಿ ಕರೆದು ಚರ್ಚೆ ಮಾಡಬೇಕಿತ್ತು. ಕೇಂದ್ರದ ಸಚಿವರು, ರಾಜ್ಯ ಸಚಿವರು, ಎಂಪಿಗಳು ಎಲ್ಲರ ಸಭೆ ಚರ್ಚಿಸಬೇಕಿತ್ತು. ಕೇಂದ್ರಕ್ಕೆ ಒಂದು ನಿಯೋಗ ಕರೆದುಕೊಂಡು ಹೋಗಿ ಒತ್ತಾಯ ಮಾಡಬೇಕಿತ್ತು. ನೆರೆಗೆ ತಕ್ಷಣ ಹಣ ಬಿಡುಗಡೆ ಮಾಡಿಸಬೇಕಿತ್ತು ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *