ಚಾಮರಾಜನಗರ | ಉದ್ಯಮಿಯನ್ನು ಲಾಡ್ಜ್‌ಗೆ ಕರೆಸಿ ರೈಡ್‌ – 3.70 ಲಕ್ಷ ದೋಚಿ ಪರಾರಿಯಾದ ಪಿಎಸ್ಐಗಾಗಿ ಶೋಧ

Public TV
1 Min Read

ಚಾಮರಾಜನಗರ: ಇಲ್ಲಿನ (Chamarajanagar) ಸೈಬರ್ ಕ್ರೈಂ ಠಾಣೆಯ ಪಿಎಸ್ಐ ಹಾಗೂ ಟೀಂ ಸೇರಿ ಹಣ (Money) ಡಬ್ಬಲ್‌ ಮಾಡುವುದಾಗಿ  ತಮಿಳುನಾಡು ಉದ್ಯಮಿಯೊಬ್ಬರಿಗೆ 3.70 ಲಕ್ಷ ರೂ. ವಂಚಿಸಿ, ಬಂಧನ ಭೀತಿಯಲ್ಲಿ ತಲೆ ಮರೆಸಿಕೊಂಡಿದ್ದಾರೆ.

ಚಾಮರಾಜನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್ಐ ಅಯ್ಯನಗೌಡ ಅದೇ ಠಾಣೆಯ ಕಾನ್ಸ್‌ಟೇಬಲ್‌ ಮೋಹನ್, ಮಹೇಶ್ ಹಾಗೂ ಚಾಮರಾಜನಗರ ಟೌನ್ ಠಾಣೆಯ ಕಾನ್ಸ್‌ಟೇಬಲ್ ಬಸವಣ್ಣರ ಮೇಲೆ ಈ ಸಂಬಂಧ ಎಫ್ಐಆರ್ ದಾಖಲಾಗಿದೆ. ನಾಲ್ಕು ಮಂದಿ ಆರೋಪಿಗಳು ಈಗ ತಲೆ ಮರೆಸಿಕೊಂಡಿದ್ದಾರೆ. ಮಾಹಿತಿ ಖಚಿತವಾಗುತ್ತಿದ್ದಂತೆ ಎಸ್‌ಪಿ ಡಾ.ಬಿ.ಟಿ ಕವಿತಾ ಅವರು ನಾಲ್ಕು ಮಂದಿ ಪೊಲೀಸರನ್ನು ಅಮಾನತು ಮಾಡಿದ್ದಾರೆ.

ಜು.26 ರಂದು ತಮಿಳುನಾಡು ಮೂಲದ ಉದ್ಯಮಿ ಸಚ್ಚಿದಾನಂದ ಮೂರ್ತಿಗೆ ಕರೆ ಮಾಡಿ, ಸೈಯದ್ ಅನ್ಸಾರಿ ಹಾಗೂ ಇಮ್ರಾನ್ 3 ಲಕ್ಷ ರೂ. ತನ್ನಿ ಆ ಹಣವನ್ನ ಒಂದು ತಿಂಗಳ ಒಳಗಾಗಿ ಡಬಲ್ ಮಾಡಿ ಕೊಡ್ತೀವಿ ಎಂದು ನಂಬಿಸಿದ್ದಾರೆ. ಈ ವಿಚಾರ ನಂಬಿ ಉದ್ಯಮಿ ಚಾಮರಾಜನಡರದ ಹೋಟೆಲ್ ಗೆ ಬಂದಿದ್ರು. ಈ ವೇಳೆ ಮೊದಲೇ ಪಕ್ಕಾ ಪ್ಲ್ಯಾನ್ ಮಾಡಿದ ರೀತಿ ಅನ್ಸಾರಿ ಹಾಗೂ ಸೈಯದ್ ಸಿಇಎನ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಅಯ್ಯನ ಗೌಡಗೆ ವಿಷಯ ತಿಳಿಸುತ್ತಾರೆ. ತಕ್ಷಣವೇ ಅಯ್ಯನಗೌಡ ಮೂರು ಜನ ಕಾನ್ಸ್‌ಟೇಬಲ್ ಜೊತೆ ಸೇರಿ ಹೋಟೆಲ್ ಮೇಲೆ ದಾಳಿ ಮಾಡಿ ಧಮ್ಕಿ ಹಾಕಿ, ಕೇಸ್ ರಿಜಿಸ್ಟರ್ ಆಗ್ಬಾರ್ದು ಅಂದ್ರೆ 4 ಲಕ್ಷ ರೂ. ಕೊಡಿ ಎಂದು ಧಮ್ಕಿ ಹಾಕ್ತಾರೆ. ಬಳಿಕ ಉದ್ಯಮಿ ಬಳಿಯಿದ್ದ 3 ಲಕ್ಷ ಹಣ ಕಸಿದುಕೊಂಡು, 70 ಸಾವಿರ ರೂ. ಹಣವನ್ನು ಫೋನ್ ಪೇ ಮೂಲಕ ಅನ್ಸಾರಿ ಎಂಬ ಮತ್ತೊಬ್ಬ ಆರೋಪಿಯ ಖಾತೆಗೆ ಹಾಕಿಸಿ ಕೊಂಡಿದ್ದರು.

ಉದ್ಯಮಿ ಸಚ್ಚಿದಾನಂದ ಸೀದಾ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಆರೋಪಿಗಳಾದ ಅನ್ಸಾರಿ ಹಾಗೂ ಸೈಯದ್ ಬಂಧನ ಆಗುತ್ತಿದ್ದಂತೆ ಪಿಎಸ್ಐ ಅಯ್ಯನಗೌಡ, ಬಸವಣ್ಣ, ರಮೇಶ್ ಹಾಗೂ ಮೋಹನ್ ಈಗ ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

Share This Article