ಸಿನಿಮಾ ಸ್ಟೈಲ್‍ನಲ್ಲಿ ಗಾಂಜಾ ಸಾಗಾಟ ಮಾಡ್ತಿದ್ದ ಗ್ಯಾಂಗ್ – 10 ಕಿ.ಮೀ ಚೇಸ್ ಮಾಡಿ ಹಿಡಿದ ಪೊಲೀಸರು

Public TV
1 Min Read

– 1.10 ಕೋಟಿ ರೂ. ಮೌಲ್ಯದ ಗಾಂಜಾ ಸೀಜ್

ಚಾಮರಾಜನಗರ: ಜಿಲ್ಲೆಯ (Chamarajanagar) ಇತಿಹಾಸದಲ್ಲೇ ಮೊದಲ ಬಾರಿಗೆ 1.10 ಕೋಟಿ ರೂ. ಮೌಲ್ಯದ 221 ಕೆ.ಜಿ ಗಾಂಜಾ ಜಪ್ತಿಯಾಗಿದೆ. ಕೊಳ್ಳೇಗಾಲದ ನರೀಪುರದ ಸಮೀಪ ಕ್ಯಾಂಟರ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದು, ಅಪಾರ ಪ್ರಮಾಣದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಸೆಂದಿಲ್ ಕುಮಾರ್, ವಿನಯ್ ಹಾಗೂ ಉಮಾ ಶಂಕರ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳು ಕ್ಯಾಂಟರ್‍ನಲ್ಲಿ ಫ್ಲೈವುಡ್ ತುಂಬಿಕೊಂಡು ಅದರ ಮಧ್ಯ ಭಾಗದಲ್ಲಿ ನಾಲ್ಕು ಚೀಲಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಆಂಧ್ರದ ವಿಶಾಖ ಪಟ್ಟಣಂನಿಂದ ದಕ್ಷಿಣ ಕನ್ನಡಕ್ಕೆ ಈ ಫ್ಲೈವುಡ್ ಶೀಟ್‍ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಆರೋಪಿಗಳು ಪರ್ಮಿಟ್ ತೆಗೆದುಕೊಂಡಿದ್ದರು. ಅಧಿಕಾರಿಗಳು ತಡೆದರೆ ಈ ಅನುಮತಿ ಪತ್ರ ತೋರಿಸಿ ಪಾರಾಗುತ್ತಿದ್ದರು. ಇದನ್ನೂ ಓದಿ: ಮೈ-ಬೆಂ. ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ- ಚಾಲಕ ಸಾವು

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೊಳ್ಳೆಗಾಲ ಗ್ರಾಮಾಂತರ ಠಾಣೆ ಪೊಲೀಸರು ವಾಹನವನ್ನು ತಡೆದಿದ್ದಾರೆ. ಈ ವೇಳೆ ಆರೋಪಿಗಳು ಕ್ಯಾಂಟರ್‍ನ್ನು ಓವರ್ ಸ್ಪೀಡ್ ಆಗಿ ಚಲಾಯಿಸಿ ಪಾರಾಗಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಕ್ಯಾಂಟರ್‍ನ್ನು 10 ಕಿಮೀ ಚೇಸ್ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನುಳಿದ ಆರೋಪಿಗಳ ಸೆರೆಗೆ ತನಿಖಾ ತಂಡ ರಚಿಸಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಹೆತ್ತ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

Share This Article