ಚಿಕ್ಕಲ್ಲೂರು ಜಾತ್ರಾ ಮಹೋತ್ಸವಕ್ಕೆ ಅಗತ್ಯ ಸಿದ್ಧತೆ- ಕೊಳ್ಳೇಗಾಲದಲ್ಲಿ ಡಿಸಿ, ಶಾಸಕರ ನೇತೃತ್ವದಲ್ಲಿ ಸಭೆ

Public TV
2 Min Read

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಕ್ಷೇತ್ರದಲ್ಲಿ ಇದೇ ತಿಂಗಳ ಜನವರಿ 10 ರಿಂದ 14ರ ವರೆಗೆ ಘನನೀಲ ಸಿದ್ದಪ್ಪಾಜಿಯವರ ಜಾತ್ರಾ ಮಹೋತ್ಸವ ನಡೆಯಲಿದೆ. ಇದಕ್ಕೆ ಆಗಮಿಸಲಿರುವ ಭಕ್ತಾದಿಗಳ ಸೌಲಭ್ಯಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಶಾಸಕರಾದ ಆರ್.ನರೇಂದ್ರ ಹಾಗೂ ಜಿಲ್ಲಾಧಿಕಾರಿ ಬಿ.ಬಿ ಕಾವೇರಿಯವರು ಹೇಳಿದರು.

ಕೊಳ್ಳೇಗಾಲ ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿಂದು ಚಿಕ್ಕಲ್ಲೂರು ಜಾತ್ರಾ ಮಹೋತ್ಸವ ಸಿದ್ಧತೆ ಸಂಬಂಧ ಪೂರ್ವಭಾವಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ಚಿಕ್ಕಲ್ಲೂರು ಕ್ಷೇತ್ರಕ್ಕೆ ಜಾತ್ರಾ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ. ಇವರಿಗೆ ಯಾವುದೇ ಕೊರತೆಯಾಗದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಹಾಗೂ ದೇವಾಲಯದ ಆಡಳಿತ ಮಂಡಳಿಯವರಿಗೆ ತಿಳಿಸಲಾಗಿದೆ. ಕುಡಿಯುವ ನೀರು, ರಸ್ತೆ, ವಾಹನ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ತಿಳಿಸಲಾಗಿದೆ ಎಂದರು.

ಶಾಸಕರಾದ ಆರ್.ನರೇಂದ್ರ ಅವರು ಮಾತನಾಡಿ, ಈ ಬಾರಿ ಜಾತ್ರೆಗಾಗಿ 150 ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಮುಡಿಕಟ್ಟೆಯಲ್ಲಿ ಸ್ವಚ್ಛತೆ ಹಾಗೂ ಸುರಕ್ಷತಾ ಕ್ರಮಗಳಿಗೆ ಸೂಚಿಸಲಾಗಿದೆ.ತಾತ್ಕಾಲಿಕ ಶೌಚಾಲಯ ಇನ್ನಿತರ ಅಗತ್ಯ ಕ್ರಮಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ಮಾತನಾಡಿ, ದೇವರ ಹೆಸರಿನಲ್ಲಿ ಪ್ರಾಣಿಬಲಿ ನಡೆಸುವಂತಿಲ್ಲ. ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮ 1963ರ ಮೇರೆಗೆ ಪ್ರಾಣಿಬಲಿ ಕೃತ್ಯಗಳು ಅಪರಾಧವಾಗಿದೆ. ಉಚ್ಛನ್ಯಾಯಾಲಯದ ನಿರ್ದೇಶನದಂತೆ ಪ್ರಾಣಿಬಲಿ ಹಾಗೂ ಮಾರಕಾಸ್ತ್ರ ತರುವುದನ್ನು ನಿಷೇಧಿಸಲಾಗಿದೆ. ಈ ಹಿನ್ನಲೆಯಲ್ಲಿ ಜನವರಿ 10ರಿಂದ 14ರ ಮಧ್ಯ ರಾತ್ರಿಯವರೆಗೆ ಚಿಕ್ಕಲ್ಲೂರು ಜಾತ್ರಾ ಪ್ರದೇಶ, ಹೊಸಮಠದ ದೇವಸ್ಥಾನದ ಪರಿಧಿ ವ್ಯಾಪ್ತಿಯಲ್ಲಿ ದೇವರ ಹೆಸರಿನಲ್ಲಿ ಯಾವುದೇ ಪ್ರಾಣಿಬಲಿ ನೀಡುವುದು ಹಾಗೂ ಮಾರಕಾಸ್ತ್ರಗಳನ್ನು ತರುವುದನ್ನು ತಡೆಗಟ್ಟಲು ಅಗತ್ಯಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿಯೇ ವಿವಿದ ಪ್ರದೇಶಗಳಲ್ಲಿ ಹೆಚ್ಚುವರಿ ಸೆಕ್ಟರ್ ಅಧಿಕಾರಿಗಳನ್ನಾಗಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಶಾಸಕರಾದ ಆರ್.ನರೇಂದ್ರ ಮಾತನಾಡಿ, ವಿದ್ಯುತ್ ಪೂರೈಕೆ,ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ಸೂಚಿಸಲಾಗಿದೆ. ಏಕಮುಖ ಸಂಚಾರಕ್ಕೆ ಅವಕಾಶ ನೀಡುವ ಮೂಲಕ ಸುಗಮವಾಗಿ ವಾಹನಗಳ ಓಡಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಹೆಚ್ಚು ಪೊಲೀಸರನ್ನು ನಿಯೋಜಿಸಿ ಅಗತ್ಯ ಭದ್ರತೆ ಒದಗಿಸಲಾಗುತ್ತಿದೆ. ಒಟ್ಟಾರೆ ಜಾತ್ರೆಗೆ ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಇಂದಿನ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *